ಕುಶಾಲನಗರ, ಏ. 15: ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೈನಿಕರ ಬಗ್ಗೆ ಇತ್ತೀಚಿಗೆ ನೀಡಿರುವ ಹೇಳಿಕೆಗೆ ಕುಶಾಲನಗರ ಮಾಜಿ ಸೈನಿಕರ ಸಂಘ ಖಂಡನೆ ವ್ಯಕ್ತಪಡಿಸಿದೆ.

ಅಧ್ಯಕ್ಷ ನಿವೃತ್ತ ಸಾರ್ಜೆಂಟ್ ಎಂ.ಎನ್. ಮೊಣ್ಣಪ್ಪ ಸಂಘದ ಕಚೆÉೀರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ತಮ್ಮ ಚುನಾವಣಾ ಭಾಷಣದಲ್ಲಿ ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದ ಪಾಪದ ಯುವಕರು ಸೇನೆಗೆ ಸೇರುತ್ತಾರೆ ಎಂದಿರುವದು ಸೇವೆಯಲ್ಲಿರುವ ಸೈನಿಕರಿಗೂ ನಿವೃತ್ತ ಸೈನಿಕರಿಗೂ ಮಾಡಿರುವ ಅಪಮಾನವಾಗಿದೆ. ದೇಶದ ಬೆನ್ನೆಲುಬಾದ ಸೈನಿಕರ ಬಗ್ಗೆ ಈ ರೀತಿಯ ಹೇಳಿಕೆ ನೀಡುವದು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ. ಮುಖ್ಯಮಂತ್ರಿಗಳು ಸೈನಿಕರ ಹಾಗೂ ಮಾಜಿ ಸೈನಿಕರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶವನ್ನು ಕಾಯುತ್ತಾರೆ. ತಮ್ಮ ಸೇವೆಯೊಂದಿಗೆ ತಮ್ಮ ಕುಟುಂಬ ಸದಸ್ಯರನ್ನು ಸೇನೆಗೆ ಸೇರಿಸುವ ಮನೋಭಾವನೆ ಉಳ್ಳವರಾಗಿದ್ದು ಇಂತಹ ಸಂದರ್ಭ ಸೇನೆಯ ಬಗ್ಗೆ ತಮ್ಮ ಮನ ಬಂದಂತೆ ಮಾತನಾಡುವದು ಸರಿಯಲ್ಲ ಎಂದಿದ್ದಾರೆ.

ಈ ಸಂದರ್ಭ ಸಂಘದ ಕಾರ್ಯದರ್ಶಿ ಸುಬೇದಾರ್, ನಿರ್ದೇಶಕರುಗಳಾದ ಮೇಜರ್ ಎಸ್.ಆರ್. ಮಾದಪ್ಪ, ನಾಯಕ್ ಜೆ.ಎನ್.ಪದ್ಮನಾಭ, ಸುಬೇದಾರ್ ಮೇಜರ್ ಕೆ.ಎಂ.ಸೋಮಪ್ಪ, ಸುಬೇದಾರ್ ಪಿ.ಬಿ.ರವಿ, ಹವಾಲ್ದಾರ್ ವಿ.ಎ.ನಂಜುಂಡ ಇದ್ದರು.