ಮಡಿಕೇರಿ ಏ. 15: ಲೋಕಸಭಾ ಸದಸ್ಯರಾಗಿ ಕೊಡಗಿನ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದ ಮತ್ತು ಅಭಿವೃದ್ಧಿ ಪರ ಕಾಳಜಿ ವಹಿಸದ ಪ್ರತಾಪಸಿಂಹ ಅವರು ಕಳೆದ ಐದು ವರ್ಷಗಳ ಕಾಲ ಜವಬ್ದಾರಿ ರಹಿತವಾಗಿ ನಡೆದುಕೊಂಡಿದ್ದು, ಬಿಜೆಪಿ ಮಂದಿಯಿಂದಲೇ ಇವರು ತಿರಸ್ಕರಿಸಲ್ಪಟ್ಟಿದ್ದರು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಲೋಕಸಭಾ ಚುನಾವಣೆಯ ಹಂತದಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸದ ಪ್ರತಾಪಸಿಂಹ ತಮ್ಮ ಅಧಿಕಾರದ ಅವಧಿಯುದ್ದಕ್ಕೂ ಕೊಡಗಿನಿಂದ ದೂರವೇ ಉಳಿದಿದ್ದರು ಎಂದು ಟೀಕಿಸಿದರು. ಜನಸಾಮಾನ್ಯರೊಂದಿಗೆ ಬೆರೆತು, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕೇಂದ್ರದಲ್ಲಿ ಜಿಲ್ಲೆಯನ್ನು ಸಮರ್ಥವಾಗಿ ಪ್ರತಿನಿಧಿಸುವ ಸಂಸದರೊಬ್ಬರ ಅಗತ್ಯವಿದೆ.
ವಿಜಯಶಂಕರ್ ಅವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆÉಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿಲ್ಲವೆಂದು ಬಿಜೆಪಿ ಮಂದಿ ಆರೋಪಿಸುತ್ತಿದ್ದಾರೆ. ಆದರೆ, ಅಂದು ರಾಜ್ಯದಲ್ಲಿದ್ದುದು ಯಡಿಯೂರಪ್ಪ ಅವರ ಸರ್ಕಾರ, ಅವರದೇ ಸರ್ಕಾರವಿದ್ದಾಗ ಅವರದೇ ಉಸ್ತುವಾರಿ ಸಚಿವರಿಂದ ಕೆಲಸ ಮಾಡಿಸಿಕೊಳ್ಳಲು ಇವರಿಗೆ ಯಾಕೆ ಸಾಧ್ಯವಾಗಿಲ್ಲವೆಂದು ಪ್ರಶ್ನಿಸಿದರು. ಪಕ್ಷ ಬಿಟ್ಟ ಕಾರಣಕ್ಕಾಗಿ ವಿಜಯಶಂಕರ್ ಅವರನ್ನು ವಿನಾಕಾರಣ ದೂಷಿಸುವುದು ಸರಿಯಲ್ಲವೆಂದು ವೀಣಾಅಚ್ಚಯ್ಯ ಬಿಜೆಪಿಗೆ ತಿರುಗೇಟು ನೀಡಿದರು. ರಾಜ್ಯ ಸಮ್ಮಿಶ್ರ ಸರ್ಕಾರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಮುಖಂಡರು ಧರಣಿ ನಡೆಸುತ್ತಾರೆ. ಆದರೆ ಎನ್ಡಿಎ ಸರ್ಕಾರ ಸಾಲವನ್ನು ಮನ್ನಾ ಮಾಡಿಲ್ಲ ಮತ್ತು ರೈತರು, ಬೆಳೆಗಾರರ ನೆರವಿಗೂ ಬರಲಿಲ್ಲ ಎಂದು ಆರೋಪಿಸಿದ ವೀಣಾಅಚ್ಚಯ್ಯ, ಹಿಂದೆ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಬೆಳೆಗಾರರ 600 ಕೋಟಿಯಷ್ಟು ಸಾಲಮನ್ನಾ ಮಾಡಲಾಗಿತ್ತು. ಅಲ್ಲದೆ ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲದ ಮೊತ್ತ 1 ಲಕ್ಷ ರೂ.ಗಳನ್ನು ಮನ್ನಾ ಮಾಡಿದೆ, ನಾನೂ ಕೂಡ ಒಬ್ಬ ಫಲಾನುಭವಿ ಎಂದು ವೀಣಾಅಚ್ಚಯ್ಯ ಗಮನ ಸೆಳೆದರು.
ಗೋಣಿಕೊಪ್ಪಲು ಆರ್ಎಂಸಿ ಸದಸ್ಯ ಮಾಳೇಟಿರ ಬೋಪಣ್ಣ ಮಾತನಾಡಿ, ಕೊಡಗಿನ ಕಾಫಿ ಮತ್ತು ಕರಿಮೆಣಸು ಧಾರಣೆ ನೆಲಕಚ್ಚಿದ್ದು, ಬೆಳೆÉಗಾರರಿಗೆ ಅಗತ್ಯ ಪರಿಹಾರ ದೊರಕಿಸುವ ಬಗ್ಗೆ ಸಂಸದರು ಯಾವುದೇ ವಿಚಾರವನ್ನು ಇಲ್ಲಿಯವರೆಗೆ ಪ್ರಸ್ತಾಪಿಸಿಲ್ಲ. ಕನಿಷ್ಠ ಮಲಬಾರ್, ತಲಚ್ಚೇರಿ ಕರಿಮೆಣಸನ್ನು ಬ್ರಾಂಡ್ ಮಾಡುವ ಮೂಲಕ ಬೆಳೆಗಾರರ ನೆರವಿಗೆ ಮುಂದಾಗುವ ಪ್ರಯತ್ನವನ್ನಾದರೂ ನಡೆಸಬಹುದಿತ್ತು ಎಂದರು.
ಪ್ರಸ್ತುತ ಕಾಫಿಯ ಧಾರಣೆÉ 1996 ರಲ್ಲಿ ಇದ್ದ ಸ್ಥಿತಿಯಲ್ಲೇ ಇದ್ದು, ಇದನ್ನು ಸುಧಾರಿಸುವ ಮತ್ತು ಇಲ್ಲಿನ ಕಾಫಿಯನ್ನು ಬ್ರಾಂಡ್ ಮಾಡುವ ಚಿಂತನೆಗಳನ್ನೂ ನಡೆಸಿಲ್ಲವೆಂದು ಆರೋಪಿಸಿದರು.