ಬೆಂಗಳೂರು, ಏ. 15: 2019ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಕೊಡಗು ಜಿಲ್ಲೆ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. ಶೇ. 83.31 ಫಲಿತಾಂಶದೊಂದಿಗೆ ಕೊಡಗು ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಶೆ. 92.20 ರಷ್ಟು ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, 90.91 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದೆ. ಚಿತ್ರದುರ್ಗ ಜಿಲ್ಲೆ ಶೇ. 52 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.ಪತ್ರಿಕಾಗೋಷ್ಠಿಯಲ್ಲಿಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಹಾಗೂ ನಿರ್ದೇಶಕಿ ಶಿಖಾ ಅವರುಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಮಾರ್ಚ್‍ನಲ್ಲಿ ನಡೆದ ಪರೀಕ್ಷೆಯಲ್ಲಿ ರಾಜ್ಯಾದ್ಯಂತ ಒಟ್ಟು 6,71,653 ಮಂದಿ ಪರೀಕ್ಷೆ ಬರೆದಿದ್ದು, ಈ ಪೈಕಿ 4,14,587 ಮಂದಿ ಉತ್ತೀರ್ಣರಾಗಿ ಶೇ. 61.73 ರಷ್ಟು ಫಲಿತಾಂಶ ಬಂದಿದೆ. ಈ ಬಾರಿಯೂ ಕೂಡ ಗ್ರಾಮೀಣ ಭಾಗದ ವಿದ್ಯಾರ್ಥಿ ಗಳೇ ಮೇಲುಗೈ ಸಾಧಿಸಿದ್ದಾರೆ ಎಂದು ಮಾಹಿತಿ ನೀಡಿದರು.ಕೊಡಗು ಜಿಲ್ಲೆಯಲ್ಲಿ ಒಟ್ಟು 5,177 ಮಂದಿ ಪರೀಕ್ಷೆ ಬರೆದಿದ್ದು, ಈ ಪೈಕಿ 4,313 ಮಂದಿ ಉತ್ತೀರ್ಣರಾಗಿ ಶೇ. 83.3 ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ

(ಮೊದಲ ಪುಟದಿಂದ) 1,258 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, 931 ಮಂದಿ ಉತ್ತೀರ್ಣರಾಗಿ ಶೇ. 74 ರಷ್ಟು ಫಲಿತಾಂಶ ಬಂದಿದೆ. ಈ ಪೈಕಿ ಬಾಲಕರಲ್ಲಿ 791 ಮಂದಿಯಲ್ಲಿ 442 ಮಂದಿ ಉತ್ತೀರ್ಣರಾಗಿದ್ದರೆ, ಬಾಲಕಿಯರಲ್ಲಿ 769 ಮಂದಿ ಪೈಕಿ 563 ಮಂದಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 2,736 ಮಂದಿ ಪೈಕಿ 2,382 ಮಂದಿ ಉತ್ತೀರ್ಣರಾಗಿ ಶೇ. 87 ರಷ್ಟು ಫಲಿತಾಂಶ ಬಂದಿದೆ. ಈ ಪೈಕಿ 1,583 ಮಂದಿ ಬಾಲಕರಲ್ಲಿ 1,154 ಮಂದಿ ಉತ್ತೀರ್ಣರಾಗಿದ್ದರೆ, ಬಾಲಕಿಯರಲ್ಲಿ 1,576 ಮಂದಿ ಪೈಕಿ 1,400 ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 1,183 ಮಂದಿ ಪೈಕಿ 1,000 ಮಂದಿ ಉತ್ತೀರ್ಣರಾಗಿ ಶೇ. 85 ರಷ್ಟು ಫಲಿತಾಂಶ ಬಂದಿದೆ. ಈ ಪೈಕಿ 512 ಮಂದಿ ಬಾಲಕರಲ್ಲಿ 414 ಮಂದಿ ಉತ್ತೀರ್ಣರಾಗಿದ್ದರೆ, 737 ಮಂದಿ ಬಾಲಕಿಯರಲ್ಲಿ 607 ಮಂದಿ ಉತ್ತೀರ್ಣರಾಗಿದ್ದಾರೆ.

ನಗರ ಪ್ರದೇಶದಿಂದ 2,998 ಮಂದಿ ಪರೀಕ್ಷೆ ಬರೆದಿದ್ದು, 2,514 ಮಂದಿ ಉತ್ತೀರ್ಣರಾಗಿ ಶೇ. 83.86 ರಷ್ಟು ಫಲಿತಾಂಶ ಬಂದಿದ್ದರೆ, ಗ್ರಾಮೀಣ ಭಾಗದಿಂದ 2,179 ಮಂದಿ ಪರೀಕ್ಷೆ ಬರೆದಿದ್ದು, 1,799 ಮಂದಿ ಉತ್ತೀರ್ಣರಾಗಿ ಶೇ. 82.56 ಫಲಿತಾಂಶ ಲಭ್ಯವಾಗಿದೆ.

ರಾಜ್ಯಾದ್ಯಂತ ಒಟ್ಟು 80 ಕಾಲೇಜುಗಳಿಗೆ ಶೇ. 100 ಫಲಿತಾಂಶ ಬಂದಿದ್ದು, 98 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಈ ಪೈಕಿ ಮೂರು ಸರಕಾರಿ ಪದವಿ ಪೂರ್ವ ಕಾಲೇಜುಗಳಾಗಿದ್ದರೆ, 1 ಅನುದಾನಿತ ಹಾಗೂ 94 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಾಗಿವೆ.

-ಬಿ.ಜಿ. ರವಿಕುಮಾರ್.