ಶನಿವಾರಸಂತೆ, ಏ. 14: ಸಮೀಪದ ಗೋಪಾಲಪುರ ಗ್ರಾಮದ ಬನಶಂಕರಿ ದೇವಾಲಯದಲ್ಲಿ ದೇವಾಂಗ ಸಂಘ ಹಾಗೂ ದೇವಾಲಯ ಸಮಿತಿ ವತಿಯಿಂದ ಬನಶಂಕರಿ ಅಮ್ಮನವರ 21ನೇ ವರ್ಷದ ವಾರ್ಷಿಕ ಮಹೋತ್ಸವ ತಾ. 16 ಮತ್ತು 17 ರಂದು ನಡೆಯಲಿದೆ.
ತಾ. 16ರ ಬೆಳಿಗ್ಗೆ 8 ಗಂಟೆಯಿಂದ ಮಹಾಗಣಪತಿ ಪೂಜೆ, ಶ್ರೀ ವೀರಭದ್ರ ಸ್ವಾಮಿ ಪೂಜೆ, ನವಗ್ರಹ ಪೂಜಾ ಪೂರ್ವಕ ಅಮ್ಮನವರಿಗೆ ಫಲ ಪಂಚಾಮೃತ ಅಭಿಷೇಕ, ಶ್ರೀ ಸೂಕ್ತ, ಜಲಾಭಿಷೇಕ, ಅಲಂಕಾರ ಸೇವೆ ನೆರವೇರಲಿದೆ. 10 ಗಂಟೆಗೆ ಮಹಾಗಣಪತಿ, ನವಗ್ರಹ ಹೋಮ, ದುರ್ಗಾವಾಸ್ತು, ಮೃತ್ಯುಂಜಯ ಬ್ರಹ್ಮ, ವಿಷ್ಣು, ಮಹೇಶ್ವರಾದಿ ಪೂಜಾ ಮತ್ತು ದುರ್ಗಾ ಹೋಮ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ ನಡೆದು ಪ್ರಸಾದ ವಿನಿಯೋಗವಿರುತ್ತದೆ.
ವಾರ್ಷಿಕೋತ್ಸವದ ಅಂಗವಾಗಿ ಮಧ್ಯಾಹ್ನ 1 ಗಂಟೆಯಿಂದ ಭಕ್ತಾದಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮವಿದೆ. ರಾತ್ರಿ 8 ಗಂಟೆಗೆ ಅಮ್ಮನವರಿಗೆ ಮಹಾಪೂಜೆ, ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಸುಗ್ಗಿ ಕುಣಿತ ಹಾಗೂ ಪಟಾಕಿಯ ಪ್ರದರ್ಶನವಿದೆ.
ತಾ. 17 ರಂದು ಬೆಳಿಗ್ಗೆ 4 ಗಂಟೆಗೆ ಬನಶಂಕರಿ ಅಮ್ಮನವರನ್ನು ಅಡ್ಡಪಲ್ಲಕ್ಕಿಯಲ್ಲಿ ವಾದ್ಯ ಸಮೇತ ಗಂಗಾ ಸ್ನಾನಕ್ಕೆ ತರುವದು, ಪಂಚಕಲಶಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತರಲಾಗುವದು. ಬೆಳಿಗ್ಗೆ 8 ಗಂಟೆಗೆ ಕೆಂಡೋತ್ಸವ, 9 ಗಂಟೆಗೆ ದೇವಾಲಯ ಪ್ರವೇಶ ನಂತರ ಅಮ್ಮನವರಿಗೆ ಕುಂಕುಮಾರ್ಚನೆ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ಪ್ರಸಾದ ವಿನಿಯೋಗವಿದೆ.