ವ್ಯಕ್ತಿತ್ವವನ್ನು ವಿಶೇಷವಾಗಿಸುವದರಲ್ಲಿ ಕಲೆಯ ಪಾತ್ರ ಅಪಾರ. ಎಷ್ಟೋ ಜನರಿಗೆ ಕಲೆ ಅನ್ನ ನೀಡುತ್ತಿದೆ, ಸಂತೋಷ ನೀಡುತ್ತಿದೆ ನೆಮ್ಮದಿ ನೀಡುತ್ತಿದೆ ಮನಸ್ಸಿಗೆ ಚೈತನ್ಯ ಉಂಟು ಮಾಡುತ್ತಿದೆ. ಮಕ್ಕಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಹೆಚ್ಚು ಬರವಣಿಗೆ ಬಾರದ ಮಗು ತನಗೆ ತೋಚಿದ್ದನ್ನು ಬಿಡಿಸಿ ಆನಂದಿಸುತ್ತದೆ. ಚಿತ್ರಕಲೆಯ ಮುಖೇನ ಜಾಗೃತಿಯನ್ನು ಕೂಡ ಮೂಡಿಸಬಹುದಾಗಿದೆ. ಹೇಳಿ ಕೇಳಿ ಇದು ಬಣ್ಣಗಳ ಲೋಕ ಮನಸ್ಸಿನಲ್ಲಿರುವ ಕಲ್ಪನೆಯನ್ನು ಕೆಲವರು ಬರವಣಿಗೆಯ ಮೂಲಕ ಪ್ರದರ್ಶಿಸಿದರೆ, ಇನ್ನು ಕೆಲವರು ಪೇಂಟಿಂಗ್ ಮೂಲಕ ಕುಂಚಗಳಲ್ಲಿ ಅಭಿವ್ಯಕ್ತಿಪಡಿಸುತ್ತಾರೆ. ಚಿತ್ರಕಲೆ ಎಂದಾಕ್ಷಣ ಮೊದಲು ನೆನಪಾಗುವದು ಲಿಯೊನಾರ್ಡೊ ಡಾ ವಿಂಚಿಯ ಮೊನಾಲಿಸಾ!!! ಎಂದೂ ಮಾಸದ ಆ ಮುಗುಳ್ನಗೆಯ ಮುಖ... ಕ್ರಿಸ್ತನ ‘ಲಾಸ್ಟ್ ಸಪ್ಪರ್’ ಬಹುಶಃ ಇದನ್ನು ತಿಳಿಯದೆ ಇರುವವರೇ ಇಲ್ಲ...! ಇಂತಹ ಅಭೂತಪೂರ್ವ ಮೇರು ಕೃತಿಗಳ ಮಹಾನ್ ಸೃಷ್ಟಿಕರ್ತರೇ ‘ಲಿಯೊನಾರ್ಡೊ ಡಾ ವಿಂಚಿ’ ಇವರ ಪೂರ್ಣ ಹೆಸರು ಲಿಯನಾರ್ಡೊ ಡಿಸೆರ್ ಪಿಯೆರೋ ಡ-ವಿಂಚಿ ಇಟಾಲಿಯನ್ ವಾಸ್ತುಶಿಲ್ಪಿ. ಇವರು ಕೇವಲ ವರ್ಣಚಿತ್ರಕಾರ ಮಾತ್ರವಲ್ಲ ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ ರೇಖಾ ಗಣಿತ ಶಾಸ್ತ್ರಜ್ಞ, ಯಂತ್ರ ಶಿಲ್ಪಿ ಹೀಗೆ ಇವರು ಹಲವಾರು ವಿಷಯಗಳಲ್ಲಿ ತೋರಿರುವ ಅತ್ಯಂತ ಕುತೂಹಲ ಆಸಕ್ತಿ ಸೃಜನಶೀಲತೆಯಿಂದಾಗಿ ಇವರನ್ನು ಸಾರ್ವತ್ರಿಕ ಮೇಧಾವಿ ಎಂದು ಪರಿಗಣಿಸಲಾಗಿದೆ. ಮೊನಾಲಿಸಾ, ದ ಲಾಸ್ಟ್ ಸಪ್ಪರ್, ವಿರ್ಟುವಿಯನ್ ಮ್ಯಾನ್, ಲೇಡಿ ವಿತ್ ಎನ್ ಏರ್ಮೆನ್, ಇವರ ಪ್ರಮುಖ ಕೃತಿಗಳು ಇವರ ಕಲಾತ್ಮಕತೆಯಲ್ಲಿ ಎಷ್ಟೊಂದು ಸೂಕ್ಷ್ಮತೆ ಇತ್ತೆಂದರೆ ನರ ನರಗಳು ಹೊರಗಿನಿಂದ ಅಭಿವ್ಯಕ್ತಿಸುವಷ್ಟು ಭವ್ಯತೆಯಿಂದ ಕೂಡಿವೆ!!! ಅವರ ಪ್ರತಿ ಚಿತ್ರಗಳಲ್ಲಿಯೂ ಸಂಚಲನೆ ಭಾವುಕತೆಗಳು ಕಳೆಗಟ್ಟಿವೆ. ಬಹುಶಃ ಇವರ ಚಿತ್ರಗಳಷ್ಟು ಮರುಮುದ್ರಣ ಕಂಡ ಬೇರೆ ಚಿತ್ರಗಳಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು..! ಪ್ರತಿ ವಿಚಾರವನ್ನು ಆಳವಾಗಿ ಅರಿಯಬೇಕು ಎಂಬ ವೈಚಾರಿಕ ದಾಹ ಮತ್ತು ಕುತೂಹಲ ಇವರನ್ನು ತುಂಬಾ ಎತ್ತರಕ್ಕೆ ತಂದು ನಿಲ್ಲಿಸಿತು. ಲಿಯೊನಾರ್ಡೊ ಡಾ ವಿಂಚಿ ತಮ್ಮ ಪ್ರತಿಭೆಗಾಗಿ ಪ್ರಜ್ಞಾವಂತರಿಂದ ಎಷ್ಟು ಗೌರವಿಸಲ್ಪಡುತ್ತಿದ್ದರೋ ಅದೇ ರೀತಿಯಲ್ಲಿ ಮತಾಂಧ ಮೂಡರಿಂದ ಮತ್ತು ಅಧಿಕಾರಶಾಹಿ ಅಹಂಕಾರಿಗಳಿಂದ ಅಪಮಾನ ಬಹಿಷ್ಕಾರಗಳನ್ನು ಎದುರಿಸಿದರು ಹೀಗಾಗಿ ಅತ್ತಿಂದಿತ್ತ ಪಲಾಯನ ಹೇಳಬೇಕಾದ ಅವರ ಬದುಕಿನಲ್ಲಿ ಅನೇಕ ಭವ್ಯ ಕೃತಿಗಳು ಅಪೂರ್ಣವಾಗಿ ನಿಲ್ಲುವಂತಾಯಿತು.

ಶಿಕ್ಷಣದಲ್ಲಿ ಚಿತ್ರಕಲೆ: ಚಿಂತನ ಮತ್ತು ಪರಿವರ್ತನಾ ಸಾಮಥ್ರ್ಯವೂ ಶೀಘ್ರವಾಗಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಶ್ರಮವಿಲ್ಲದೆ ಹಾಗೂ ಸುಲಭ ವಿಧಾನದಲ್ಲಿ ಬೆಳವಣಿಗೆಯಾಗಲು ಉತ್ತಮ ಅವಕಾಶವಿರುವದು ಚಿತ್ರಕಲಾ ಅಭ್ಯಾಸದಲ್ಲಿ ಮಾತ್ರ ಇಂದು ನಾವು ಸಣ್ಣಪುಟ್ಟ ಚಿತ್ರಗಳಿಗೂ ನೆಟ್ ಎಂಬ ಮಾಯಾಜಾಲದ ಗಣಕಯಂತ್ರದ ಮೊರೆ ಹೋಗುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ಸೃಜನಶೀಲತೆ ಎಲ್ಲೋ ಮರೆಯಾಗಿ ಹೋಗುತ್ತಿದೆ ಎಂದೆನಿಸುತ್ತಿದೆ. ಹಸ್ತ ಕುಶಲತೆಯ ಸಾಮಥ್ರ್ಯದಿಂದ ಸಿಗುವ ಮೆಚ್ಚುಗೆ ತೃಪ್ತಿ ಗಣಕಯಂತ್ರದ ಚಾಲನೆಯಲ್ಲಿ ನಮಗೆ ಸಿಗಲಾರದು ಇಂದಿನ ಶಿಕ್ಷಣ ಪದ್ಧತಿಯಲ್ಲಿ ಚಿತ್ರಕಲೆಗೆ ಪ್ರಾಧಾನ್ಯತೆ ಇಲ್ಲದಿರುವದರಿಂದಾಗಿ ಮುಂದೆ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣ ಮತ್ತು ತರಬೇತಿ ಹಂತಕ್ಕೆ ಹೋದಾಗ ಅವಶ್ಯ ವಸ್ತುಗಳ ಆಕಾರ ಕಲ್ಪನೆಗಳ ಬಗ್ಗೆ ಪರಿತಪಿಸಬೇಕಾಗುತ್ತದೆ. ಭಾಷಾ ಅಭ್ಯಾಸದಂತೆ ಚಿತ್ರಕಲಾ ಪ್ರಾರಂಭಿಕ ಅಭ್ಯಾಸವೂ ಶಿಕ್ಷಣದಲ್ಲಿ ಬುನಾದಿ ಹಂತದಿಂದಲೇ ಪ್ರಾರಂಭಿಸಿದರೆ ವಸ್ತುಗಳ ಆಕಾರ ಕಲ್ಪನೆಗಳ ಜೊತೆಗೆ ಚಿಂತನಾ ಸಾಮಥ್ರ್ಯವೂ ಕೂಡ ಬೆಳವಣಿಗೆಯಾಗಬಲ್ಲದು. ಮುಂದೆ ವೃತ್ತಿ ಶಿಕ್ಷಣ ಮತ್ತು ತರಬೇತಿ ಹಂತಕ್ಕೆ ಹೋದಾಗ ಅವಶ್ಯ ವಸ್ತುಗಳ ಆಕಾರ ಕಲ್ಪನೆಗಳ ಬಗ್ಗೆ ಪರಿತಪಿಸುವ ಬವಣೆ ಬರುವದಿಲ್ಲ ಭಾಷೆ ಸಾಹಿತ್ಯವು ವಿಷಯ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ ಅಷ್ಟೇ. ಆದರೆ ಚಿತ್ರಕಲೆ ಅಭ್ಯಾಸದಿಂದ ಪ್ರತ್ಯಕ್ಷ ಹಾಗೂ ಪ್ರಾಯೋಗಿಕ ವೈಜ್ಞಾನಿಕ ಮನೋಭಾವನೆ ತಂತ್ರಜ್ಞಾನ ಮತ್ತು ಚಿಂತನಾ ಸಾಮಥ್ರ್ಯ ಬಹುಬೇಗ ರೂಢಿಸಿ ಕೊಳ್ಳಬಹುದಾಗಿದೆ. ಭಾಷಾ ಕಲಿಕೆಯಂತೆ ಚಿತ್ರಕಲೆಯೂ ಪ್ರಾಥಮಿಕ ಹಂತದಿಂದಲೇ ಅಡಿಪಾ ಯವಾಗಿ ಶಿಕ್ಷಣ ವ್ಯವಸ್ಥೆಯೊಳಗೆ ಬಂದರೆ ಕಲೆಗಾರಿಕೆ ಕೆಲವೇ ವ್ಯಕ್ತಿಗಳ ಕೈವಶವಾಗುವದಕ್ಕಿಂತ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸಾಂದರ್ಭಿಕ ಕುಶಲತೆ ಸೃಷ್ಟಿಯಾದರೆ ಭಾರತದ ಭವಿಷ್ಯ ವರ್ಣರಂಜಿತ ವಾಗುವದರಲ್ಲಿ ಸಂಶಯವಿಲ್ಲ.

- ಸಿ.ಎಸ್. ಸತೀಶ್, ಶಿಕ್ಷಕರು, ಸ.ಕಿ.ಪ್ರಾ. ಶಾಲೆ ಮುಳ್ಳೂರು.