ನಾಪೆÇೀಕ್ಲು, ಏ. 14: ರವಿ - ಶಂಕರ ಸಮ್ಮಿಲನವನ್ನು ನೋಡಬೇಕೇ? ಮೂಟೇರಿ ಉಮಾಮಹೇಶ್ವರಿ ದೇವಳದಲ್ಲಿ ಕಣ್ತುಂಬಿಸಿಕೊಳ್ಳಲು ಭಕ್ತ ಸಮೂಹ ಕಾತುರದಿಂದ ಕಾಯುತ್ತಿದೆ. ಸೌರಮಾನ ಯುಗಾದಿಯುಂದು 15ರಂದು (ಇಂದು) ಬೆಳಿಗ್ಗೆ 7.20 ರಿಂದ 7.40ರವರೆಗೆ ಮಾತ್ರ ಕಂಡು ಬರುವ ಈ ಅಪರೂಪದ ದೃಶ್ಯ ನಂತರದ ಎರಡು ದಿನಗಳಲ್ಲಿ ಗೋಚರಿಸಿದರೂ ಸೂರ್ಯ ಸ್ಥಾನ ಪಲ್ಲಟಗೊಳ್ಳುವದರಿಂದ ಈಶ್ವರನ ನೆತ್ತಿಯ ಮೇಲೆ ಬೀಳುವದನ್ನು ಕಾಣಲು ಸಾಧ್ಯವಿಲ್ಲ. ಈ ವರ್ಷ ಸೌರಮಾನ ಯುಗಾದಿ ಒಂದು ದಿನ ಮುಂದೆ ಹೋದ ಕಾರಣ ಈ ಬಾರಿ ತಾ. 16ರಂದು ಈ ದೃಶ್ಯವನ್ನು ವೀಕ್ಷಿಸಬಹುದಾಗಿದೆ.

ಮೊದಲು ಸೂರ್ಯ ಶಿವನ ನೆತ್ತಿಯಿಂದ ಪ್ರವೇಶಿಸಿ ಕೆಳಭಾಗಕ್ಕೆ ಚಲಿಸಿ ಕಣ್ಮರೆಯಾಗುತ್ತಾನೆ. ಈ ಸಂದರ್ಭ ದೇವರ ವಾರ್ಷಿಕೋತ್ಸವ ನಡೆಯುವದು ವಿಶೇಷ. ದೈವಿಕ ಪ್ರಕ್ರಿಯೆ ಪುರಾತನದಿಂದಲೂ ನಡೆಯುತ್ತಾ ಬಂದಿದ್ದರೂ ಸಹ ಕೆಲವು ಬೆರಳಣಿಕೆಯ ಭಕ್ತರು ಮಾತ್ರ ಇದರ ದರ್ಶನ ಪಡೆದು ಮೌನವಾಗಿರುವದು ಹೆಚ್ಚಿನ ಪ್ರಚಾರಕ್ಕೆ ಅವಕಾಶವಾಗಿಲ್ಲ ಎನ್ನಬಹುದು.

ಪ್ರಶಾಂತ ಪರಿಸರದಲ್ಲಿ ಸುಂದರವಾಗಿರುವ ಈ ಉಮಾಮಹೇಶ್ವರಿ ದೇಗುಲ ಈಶ್ವರ ಲಿಂಗ ರೂಪದಲ್ಲಿ ಪ್ರತಿಷ್ಠಾಪಿತನಾಗಿದ್ದು, ಪಾರ್ವತಿ ಉತ್ಸವ ಮೂರ್ತಿಯಾಗಿರುವದರಿಂದ ಉಮಾಮಹೇಶ್ವರಿ ಎಂದು ಪ್ರತೀತಿ. ಪುರಾತನವಾದ ದೇವಾಲಯ ಇದಾಗಿದ್ದು, ಈ ದೇವಾಲಯಕ್ಕೆ ಸುಮಾರು 1100 ವರ್ಷಗಳ ಇತಿಹಾಸವಿದೆ.

1956ರಲ್ಲಿ ಬಿದ್ದಾಟಂಡ ತಿಮ್ಮಯ್ಯ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ಈ ದೇವಾಲಯವನ್ನು ಅಭಿವೃದ್ಧಿ ಪಡಿಸಲಾಯಿತು. 1957ರಲ್ಲಿ ಈ ದೇವಾಲಯದಲ್ಲಿ ಅಷ್ಟಬಂಧ ಕೈಗೊಳ್ಳಲಾಯಿತು. ಕಳೆದ 6 ವರ್ಷಗಳ ಹಿಂದೆ ಮತ್ತೆ ಈ ದೇವಾಲಯದ ಜೀರ್ಣೋದ್ಧಾರ ಕೆಲಸ ನಡೆಸಲಾಯಿತು. ದೇವಾಲಯ ಆಕರ್ಷಕ ಗರ್ಭಗುಡಿ ಹೊಂದಿದ್ದು, ಅದರೊಳಗೆ ಮತ್ತೊಂದು ಪುಟ್ಟ ಗುಡಿಯೊಳಗೆ ಈಶ್ವರ ಲಿಂಗ ಮತ್ತು ಉಮಾಮಹೇಶ್ವರಿ ದೇವರ ವಿಗ್ರಹವಿದೆ. ಸೌರಮಾನ ಯುಗಾದಿಯಂದು ಸೂರ್ಯ ಕಿರಣ ನೇರವಾಗಿ ಶಿವಲಿಂಗಕ್ಕೆ ಬೀಳುವಂತೆ ಕ್ರಮಬದ್ಧವಾಗಿ ಲೆಕ್ಕಾಚಾರ ಹಾಕಿ ಗರ್ಭಗುಡಿಯನ್ನು ನಿರ್ಮಿಸಲಾಗಿದೆ. ಕಾಟೂರು ಹಾಗೂ ಮೂಟೇರಿಗೆ ಸಂಬಂಧಿಸಿರುವದರಿಂದ ಮೂಟೇರಿ ಉಮಾಮಹೇಶ್ವರಿ ದೇವಾಲಯವೆಂದು ಖ್ಯಾತಿ ಪಡೆದಿದೆ. -ಪಿ.ವಿ.ಪ್ರಭಾಕರ್