ವೀರಾಜಪೇಟೆ, ಏ. 13: ವೈಜ್ಞಾನಿಕ ಪದ್ಧತಿಯಲ್ಲಿ ಪ್ರಾರಂಭಿಸಿದ ರಾಷ್ಟ್ರೀಯ ಭೂಮಾಪನಕ್ಕೆ ಎರಡು ಶತಮಾನಗಳ ಇತಿಹಾಸವಿದೆ. ಬ್ರಿಟೀಷ್ ವಿಜ್ಞಾನಿ ಕರ್ನಲ್ ವಿಲಿಯಂ ಲ್ಯಾಂಬೆಟನ್ 1802ರಲ್ಲಿ ದಿ.ಟ್ರಗ್ನೋಮಾಟಿಕ್ ಸರ್ವೆ ಯೋಜನೆಗೆ ಚಾಲನೆ ನೀಡಿದರು. ಇದರ ನೆನಪಿಗಾಗಿ ರಾಷ್ಟ್ರೀಯ ಭೂ ಮಾಪನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಾಲೂಕು ತಹಶೀಲ್ದಾರ್ ಬಿ.ಎಂ. ಗೋವಿಂದರಾಜ್ ಹೇಳಿದರು. ವೀರಾಜಪೇಟೆ ಭೂ ಮಾಪನ ಇಲಾಖೆ ವತಿಯಿಂದ ಇಲ್ಲಿನ ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ 30ನೇ ಭೂ ಮಾಪನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಭೂ ಮಾಪನದ ಕುರಿತು ಪ್ರತಿಯೊಬ್ಬರಿಗೂ ಅರಿವಿರಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲೆಯ ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್ ಮಾತನಾಡಿ, ಭಾರತ ದೇಶದಲ್ಲಿ 1989ನೇ ತಾ. 10 ರಂದು ರಾಷ್ಟ್ರೀಯ ಭೂ ಮಾಪನ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಲಾಯಿತು. ರಾಷ್ಟ್ರೀಯ ಭೂ ಮಾಪನ ದೇಶದಲ್ಲಿಯೇ ಮಹತ್ವವನ್ನು ಪಡೆದಿದೆ ಎಂದರು. ತಾಲೂಕು ಕಚೇರಿಯ ಶಿರಸ್ತೆದಾ ರರುಗಳಾದ ಪ್ರವೀಣ್, ಕೆ.ಎಂ. ಚಿಣ್ಣಪ್ಪ, ಭೂ ಮಾಪನ ಸೂಪರ್‍ವೈಸರ್‍ಗಳಾದ ಬೀರೇಗೌಡ, ಮರಿಸ್ವಾಮಿ, ತಾಲೂಕಿನ ಭೂ ಮಾಪಕರು, ಕಚೇರಿಯ ಸಿಬ್ಬಂದಿ ಹಾಜರಿದ್ದರು.