ಮಡಿಕೇರಿ, ಏ.13: ಮಡಿಕೇರಿಯ ರಾಜಾಸೀಟ್ನಲ್ಲಿ ತಾ.15 ರಂದು (ನಾಳೆ) ವಿಶ್ವಕಲಾ ದಿನಾಚರಣೆ ಅಂಗವಾಗಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಆಯೋಜಿಸಿರುವ ಮತದಾನದ ಮಹತ್ವ ವಿಷಯ ಕುರಿತ ಚಿತ್ರಕಲಾ ಸ್ಪರ್ಧೆಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಮತದಾರ ಶಿಕ್ಷಣ, ಸಹಭಾಗಿತ್ವ ಸಮಿತಿ ಅಧ್ಯಕ್ಷೆ ಲಕ್ಷ್ಮೀಪ್ರಿಯ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 9.30 ಗಂಟೆಗೆ ಮಡಿಕೇರಿ ರಾಜಾಸೀಟ್ನಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಜಿಲ್ಲಾ ಮತದಾರ ಶಿಕ್ಷಣ, ಸಹಭಾಗಿತ್ವ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಹೆಸರಾಂತ ಚಿತ್ರಕಲಾವಿದ ಬಿ.ಆರ್. ಸತೀಶ್ ಮತದಾನದ ಮಹತ್ವ ಬಿಂಬಿಸುವ ಬೃಹತ್ ಕ್ಯಾನ್ವಸ್ನ್ನು ರಚಿಸಲಿದ್ದು, ಸಾರ್ವಜನಿಕರೂ ಪಾಲ್ಗೊಂಡು ಮತದಾನ ಮುಖ್ಯ ಎಂಬ ಸಂದೇಶದ ಕ್ಯಾನ್ವಸ್ನಲ್ಲಿ ಸಹಿ ಹಾಕಬಹುದಾಗಿದೆ. ಇದೇ ಸಂದರ್ಭ 5 ರಿಂದ 7 ನೇ ತರಗತಿ, 8 ರಿಂದ 10 ನೇ ತರಗತಿ ಮತ್ತು ಸಾರ್ವಜನಿಕ ವಿಭಾಗದಲ್ಲಿ ಮತದಾನದ ಮಹತ್ವ ವಿಷಯ ಕುರಿತ ಚಿತ್ರಕಲಾ ಸ್ಪರ್ಧೆ ಆಯೋಜಿತವಾಗಿದೆ ಎಂದು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್. ರವಿಶಂಕರ್, ಕಾರ್ಯದರ್ಶಿ ಎಂ.ಯು.ಮಹೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾರೈ, ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ, ಹಿರಿಯ ಜಾನಪದ ಕಲಾವಿದೆ ಸುಳ್ಳಿಮಾಡ ಗೌರು ನಂಜಪ್ಪ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಸಂಗೀತ ಪ್ರಸನ್ನ, ಖಜಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ, ಮಡಿಕೇರಿಯ ಅರುಣ್ ಸ್ಟೋರ್ಸ್ ಮಾಲೀಕ ಎಂ.ಕೆ.ಅರುಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಮಮ್ತಾಜ್ ಪಾಲ್ಗೊಳ್ಳಲಿದ್ದಾರೆ.
ಗಾಯಕರಾದ ಟಿ.ಡಿ. ಮೋಹನ್, ಕ್ಲಿಫರ್ಡ್ ಡಿಮೆಲ್ಲೋ ಅವರಿಂದ ಗಾಯನ ಕಾರ್ಯಕ್ರಮವೂ ಆಯೋಜಿತವಾಗಿದೆ.