ಸೋಮವಾರಪೇಟೆ, ಏ. 13: ಇಲ್ಲಿನ ಟೀಂ ಆ್ಯಟಿಟ್ಯೂಡ್‍ನಿಂದ ಎಳೆಯ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಸ್ಥಳೀಯ ಕ್ರಿಯೇಟಿವ್ ಅಕಾಡೆಮಿ ಶಾಲೆಯಲ್ಲಿ ಶಿಬಿರ ಆಯೋಜಿಸಿದ್ದು, ಮಕ್ಕಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಪುಟಾಣಿ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದು, ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು. ಪುಟಾಣಿ ಮಕ್ಕಳು ತಿನ್ನುವ ಚಾಕೋಲೇಟ್‍ನ ಪ್ಲಾಸ್ಟಿಕ್ ಪದರಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಮನೆ, ಸುತ್ತಮುತ್ತಲಿನ ಪ್ರದೇಶದ ನಲ್ಲಿಗಳಲ್ಲಿ ನೀರು ಸೋರಿಕೆಯಾಗುತ್ತಿದ್ದರೆ ತಡೆಗಟ್ಟಬೇಕು. ಮನೆಯಲ್ಲಿಯೂ ಸಹ ಅನಗತ್ಯ ನೀರು ಬಳಕೆ ಮಾಡಬಾರದು. ನೀರಿನ ಮಿತವ್ಯಯ ಮಾಡಬೇಕು ಎಂದರು.

ಇದರೊಂದಿಗೆ ನೀರಿನ ಸಂರಕ್ಷಣೆ, ಪರಿಸರದ ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು. ಶಿಬಿರದ ಅಂಗವಾಗಿ ಕ್ರಿಯೇಟಿವ್ ಅಕಾಡೆಮಿ ಆವರಣದಲ್ಲಿ ಗಿಡ ನೆಡುವ ಮೂಲಕ, ಮಕ್ಕಳಿಗೆ ಗಿಡ ನೆಟ್ಟು ಪೋಷಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಈ ಸಂದರ್ಭ ಟೀಂ ಆ್ಯಟಿಟ್ಯೂಡ್‍ನ ಕಿರಣ್, ಕ್ರಿಯೇಟಿವ್ ಅಕಾಡೆಮಿ ಶಾಲೆಯ ಮುಖ್ಯಸ್ಥ ಮಹೇಶ್ ಅವರುಗಳು ಉಪಸ್ಥಿತರಿದ್ದರು.