ಗೋಣಿಕೊಪ್ಪ ವರದಿ, ಏ. 12: ಚುನಾವಣೆ ಹಿನ್ನೆಲೆ, ಶಾಂತಿ-ಸುವ್ಯವಸ್ಥೆ ವಿಚಾರ ವಾಗಿ ಗೋಣಿಕೊಪ್ಪದ ಮುರುಗ ಎಂಬವರನ್ನು ಪೊಲೀಸ್ ಇಲಾಖೆ ಗಡಿಪಾರು ಮಾಡಿರುವ ವಿಚಾರದಲ್ಲಿ ದಲಿತ ವರ್ಗವನ್ನು ಧಮನ ಮಾಡುವ ಉದ್ದೇಶ ಅಡಗಿದೆ ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಕೃಷ್ಣಪ್ಪ ಆರೋಪಿಸಿದ್ದಾರೆ.

ಚುನಾವಣೆ ಸಂದರ್ಭ ಗಡಿಪಾರು ಮಾಡುವ ವಿಚಾರ ಇದೇ ಮೊದಲ ಬಾರಿಗೆ ಸಮಾಜಕ್ಕೆ ತಿಳಿಯುವಂತಾಗಿದೆ. ಅನಾವಶ್ಯಕವಾಗಿ ಅವರನ್ನು ಗಡಿಪಾರು ಮಾಡುವ ಮೂಲಕ ಸಮಾಜಕ್ಕೆ ಭಯ ಹುಟ್ಟಿಸುವಂತ ಕೆಲಸವಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಮತದಾನದ ನಂತರ ಈ ಬಗ್ಗೆ ಗಡಿಪಾರು ಮಾಡಲು ಮುಂದಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವದು ಎಂದರು. ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಮಾತನಾಡಿ, ದಲಿತ ಎಂಬ ಕಾರಣಕ್ಕೆ ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ಗಡಿಪಾರು ಮಾಡಲು ಮುಂದಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಐಪಿಸಿ ಸೆಕ್ಷನ್ 307 ಎದುರಿಸುತ್ತಿರುವ ಸಾಕಷ್ಟು ಜನರು ಇದ್ದರೂ ಕೂಡ ಅವರನ್ನು ಗಡಿಪಾರು ಮಾಡಿಲ್ಲ. ಉದ್ದೇಶಪೂರ್ವಕವಾಗಿ ದಲಿತ ರನ್ನು ಮೂಲೆಗುಂಪು ಮಾಡಲಾಗು ತ್ತಿದೆ. ಈ ಬಗ್ಗೆ ಚುನಾವಣಾ ಆಯೋಗ, ಮಾನವ ಹಕ್ಕು ಆಯೋಗವನ್ನು ಮುಂದಿನ ದಿನಗಳಲ್ಲಿ ಪ್ರಶ್ನಿಸುವ ಮೂಲಕ ನ್ಯಾಯ ಒದಗಿಸಲು ಪ್ರತಿಭಟನೆ ನಡೆಸಲಾಗುವದು. ತಪ್ಪಿದ್ದರೆ ಕಾನೂನು ಮೂಲಕ ಕ್ರಮ ಕೈ ಗೊಳ್ಳಲು ಅವಕಾಶವಿತ್ತು ಎಂದರು.

ಗೋಷ್ಠಿಯಲ್ಲಿ ಖಜಾಂಚಿ ಕುಮಾರ್ ಮಹದೇವ್, ಸಂಘಟನಾ ಸಂಚಾಲಕರುಗಳಾದ ಕರ್ಕು ಹಾಗೂ ಗಣೇಶ್ ಇದ್ದರು.