ಮಡಿಕೇರಿ, ಏ. 12: ಪ್ರವಾಹ ಪೀಡಿತವಾಗಿದ್ದ ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರ ಮಕ್ಕಳಿಗೆ ಪದವಿ ವಿದ್ಯಾರ್ಥಿ ವೇತನದ ಯೋಜನೆಯನ್ನು ಬೆಂಗಳೂರಿನ ಐಎಫ್ಐಎಂ ಹಳೇ ವಿದ್ಯಾರ್ಥಿ ಸಂಘ ಪ್ರಕಟಿಸಿದೆ. ಬಿಬಿಎ ಮತ್ತು ಬಿಎ ಎಲ್ಎಲ್ಬಿ ಪದವಿ ಪಡೆಯಲು ಬಯಸುವ ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರಕಲಿದೆ. ಅಗತ್ಯತೆ ಮತ್ತು ಪ್ರತಿಭೆ ಆಧರಿಸಿ, ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಶೇ. 100 ರಷ್ಟು ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಪೂರ್ವ ನಿರ್ಧರಿತ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಸಂಘವು ಶೇ. 100 ರಷ್ಟು ಪದವಿ ವಿದ್ಯಾರ್ಥಿ ವೇತನವನ್ನು, ಕೇರಳ ಹಾಗೂ ಕೊಡಗು ಪ್ರವಾಹ ಸಂತ್ರಸ್ತ ಪ್ರದೇಶಗಳಿಂದ ಆಯ್ದ ಇಬ್ಬರು ವಿದ್ಯಾರ್ಥಿಗಳಿಗೆ ನೀಡುತ್ತದೆ. ಇದು ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಸಾಮಾಜಿಕ ಹೊಣೆಗಾರಿಕೆಯ ಪಾತ್ರವನ್ನು ವಿಸ್ತರಿಸುವಂತಹ ಕ್ರಮ ಎಂದು ಐಎಫ್ಐಎಂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಕೀರ್ ಇಕ್ಬಾಲ್ ಹಾಗೂ ಮಾಜಿ ಕಾರ್ಯದರ್ಶಿ ಮಿಥುನ್ ಅಯ್ಯಪ್ಪ ಹೇಳಿದ್ದಾರೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ನಮೂನೆಗಳು ಐಎಫ್ಐಎಂ ಕಾಲೇಜು ಮತ್ತು ಐಎಫ್ಐಎಂ ಕಾನೂನು ಕಾಲೇಜಿನ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ.