ಮಡಿಕೇರಿ, ಏ. 11: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ, ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ ತಾ.14ರಂದು ನಡೆಯಲಿದೆ. ಉತ್ಸವದ ಅಂಗವಾಗಿ ತಾ.5 ರಿಂದಲೇ ಹಬ್ಬದ ಕಟ್ಟು ಬಿದ್ದಿದ್ದು, ವಿವಿಧ ಪೂಜಾದಿ ಕಾರ್ಯಗಳು ನಡೆಯುತ್ತಿವೆ. ತಾ. 11ರಂದು ಮಹಾದೇವರ ಕೊಡಿಯಾಟ್, ಕೈತಲಪ್ಪ ದೇವರ ಪೀಲಿಯಾಟ್ ನಡೆಯಿತು. ತಾ. 13ರಂದು ಮಧ್ಯಾಹ್ನ 2 ಗಂಟೆಗೆ ಮಹಾದೇವರ ದೊಡ್ಡ ಹಬ್ಬ, ಬೊಳಕಾಟ್, ಭಂಡಾರ ಹಾಕುವ ಕಾರ್ಯ ನಡೆಯಲಿದೆ. ತಾ. 11 ರಿಂದ 14ನೇವರೆಗೆ ಪ್ರತಿದಿನ ಬೆಳಗ್ಗಿನ ಜಾವ 4 ಗಂಟೆಗೆ ದೇವಸ್ಥಾನದ ಸುತ್ತ ದೀಪ ಇಟ್ಟು ಕೊಂಬಾಟ್, ಪೀಲಿಯಾಟ್, ಬೊಳಕಾಟ್ ನಡೆಯಲಿದೆ. ತಾ.14ರಂದು ಮಧ್ಯಾಹ್ನ 12.30 ಗಂಟೆಯಿಂದ ಕೊಡಿಯಾಟ್, ಆಂಗೋಲ, ಪೊಂಗೋಲ, ಕೊಂಬಾಟ್, ಪೀಲಿಯಾಟ್, ಬೊಳಕಾಟ್, ಭಂಡಾರ ಹಾಕುವದು, ತೆಂಗಿನಕಾಯಿಗೆ ಗುಂಡು ಹೊಡೆಯುವದು, ಕಾಳೆ ಓಡಿಸುವ ಕಾರ್ಯಗಳು ನಡೆಯಲಿವೆ. ತಾ.15ರಂದು ಮಧ್ಯಾಹ್ನ 2 ಗಂಟೆಗೆ ಸಣ್ಣ ಹಬ್ಬ ಕೊಂಬಾಟ್, ಪೀಲಿಯಾಟ್, ಭಂಡಾರ ಹಾಕುವ ಕಾರ್ಯಗಳು ನೆರವೇರಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷರು, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ವಿಶು ಹಬ್ಬಕ್ಕೆ ಕೊನ್ನಪೂ ವಿತರಣೆ

ಮಡಿಕೇರಿ, ಏ. 11: ಮಡಿಕೇರಿಯ ಹಿಂದೂ ಮಲೆಯಾಳಿ ಸಂಘದ ವತಿಯಿಂದ ವಷಂಪ್ರತಿಯಂತೆ ಈ ವರ್ಷ ಕೂಡ ವಿಶು ಹಬ್ಬದ ಪ್ರಯುಕ್ತ ವಿಶುಕಣಿಗೆ ಅಗತ್ಯವಾದ ಕೊನ್ನಪೂ (ವಿಶು ಪೂ) ಹಾಗೂ ಕೈನೀಟಂ ಅನ್ನು ವಿತರಣೆ ಮಾಡಲಾಗುತ್ತದೆ. ತಾ.14ರಂದು ಸಂಜೆ 5ಗಂಟೆಗೆ ಓಂಕಾರೇಶ್ವರ ದೇವಾಲಯ ಬಳಿ ಇರುವ ಹರಿಹರ ಸರ್ವೀಸ್ ಸ್ಟೇಶನ್‍ನಲ್ಲಿ ವಿತರಣೆ ಮಾಡಲಾಗುವದು. ಮಲೆಯಾಳಿ ಸಮಾಜ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ಪದಾಧಿಕಾರಿಗಳು ಕೋರಿದ್ದಾರೆ.