ಮಡಿಕೇರಿ.ಏ.11: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಪ್ರಾಜೆಕ್ಟ್ ಕೂರ್ಗ್ ವತಿಯಿಂದ ರೂಪಿಸಲಾದ ಯಶಸ್ವಿ ಯೋಜನೆಯ ಕಾಲೂರು ಸ್ಟೋರ್ಸ್‍ನ ಎರಡನೇ ಮಳಿಗೆ ತಾ.14 ರಂದು ಮಡಿಕೇರಿಯಲ್ಲಿ ಉದ್ಘಾಟನೆ ಯಾಗಲಿದೆ.

ಪ್ರಕೃತ್ತಿ ವಿಕೋಪಕ್ಕೊಳಗಾದ ಕಾಲೂರು ಗ್ರಾಮದ ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಾಜೆಕ್ಟ್ ಕೂರ್ಗ್ ಮೂಲಕ ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರವು ಯಶಸ್ವಿ ಹೆಸರಿನಲ್ಲಿ ಕೌಶಲ್ಯ ತರಬೇತಿಯ ಮಸಾಲೆ ಪದಾರ್ಥಗಳ ಉತ್ಪನ್ನ ತಯಾರಿಕೆಯಲ್ಲಿ ಕಾಲೂರಿನ ಮಹಿಳೆಯರಿಗೆ ತರಬೇತಿ ನೀಡಿತ್ತು. ನಂತರ ಕಾಲೂರು ಪ್ರಾಡೆಕ್ಟ್ ಹೆಸರಿನಲ್ಲಿ ಮಸಾಲೆ ಪದಾರ್ಥಗಳನ್ನು ಮಾರುಕಟ್ಟೆಗೂ ಬಿಡುಗಡೆ ಮಾಡಲಾಗಿತ್ತು.

ಜಿಲ್ಲಾಡಳಿತದ ನೆರವಿನಿಂದ ರಾಜಾಸೀಟ್ ಮುಂಬದಿಯಲ್ಲಿ ಕಾಲೂರು ಸ್ಟೋರ್ಸ್ ತೆರೆಯಲಾಗಿದ್ದು, ಇದೀಗ ಮಡಿಕೇರಿಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಶಿಶುಕಲ್ಯಾಣ ಸಂಸ್ಥೆಯ ಮುಂಬದಿ ಕಾಲೂರು ಸ್ಟೋರ್ಸ್‍ನ ಎರಡನೇ ಮಳಿಗೆ ಉದ್ಘಾಟನೆಯಾಗುತ್ತಿದೆ.

ಅಂದು ಬೆಳಗ್ಗೆ 11 ಗಂಟೆಗೆ ಕಾಲೂರು ಸ್ಟೋರ್ಸ್ ಮಳಿಗೆಯನ್ನು ಬೆಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಕನ್ನಡಿಗರ ಸಂಘದ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಉದ್ಘಾಟಿಸಲಿದ್ದಾರೆ. ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ,ಅಪ್ಪಚ್ಚು ರಂಜನ್, ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕೊಡಗು ಶಿಶುಕಲ್ಯಾಣ ಸಂಸ್ಥೆಯ ಅಧ್ಯಕ್ಷ ಕೆ.ಮೋಹನ್ ಮೊಣ್ಣಪ್ಪ, ಕಾಲೂರು ಗ್ರಾಮದ ಹಿರಿಯ ಸಾಹಿತಿ ನಾಗೇಶ್ ಕಾಲೂರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಾಜೆಕ್ಟ್ ಕೂರ್ಗ್ ಮುಖ್ಯಸ್ಥ ಬಾಲಾಜಿ ಕಶ್ಯಪ್ ಹೇಳಿದ್ದಾರೆ.