ಮಡಿಕೇರಿ, ಏ. 10: ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯ ಜಾತ್ರೆಯ ಅಂಗವಾಗಿ ಮಹದೇವಪೇಟೆಯ ಚೌಕಿಯಿಂದ ಮುತ್ತಪ್ಪ ದೇವಾಲಯದವರೆಗೆ ದೇವಾಲಯದ ಕಲಶ ಮೆರವಣಿಗೆ ಬರುವ ರಾಜಬೀದಿಯಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಮಹಿಳೆಯರು ತಮ್ಮ ಮನೆಯ ಮುಂದೆ ವರ್ಣರಂಜಿತ ರಂಗೋಲಿಗಳನ್ನು ಬಿಡಿಸಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ 5 ಮಹಿಳೆಯರಿಗೆ ಮತ್ತು ಜಾತ್ರೆಯ ಅಂಗವಾಗಿ ನಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಮತ್ತು ಮಕ್ಕಳ ಪೈಕಿ 35 ಮಂದಿಗೆ ಚಿನ್ನದ ನಾಣ್ಯದ ಉಡುಗೊರೆಯನ್ನು ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿ ನಡೆದ ಸಾಂಸ್ಕøತಿಕ ಸಮಾರಂಭದಲ್ಲಿ ಮಾತಾಜಿ ಗೋಲ್ಡ್ ಪ್ಯಾಲೇಸ್‍ನ ಮಾಲೀಕರಾದ ಸೀಮಾ ತೇಜ್‍ರಾಜ್ ಮತ್ತು ಕನ್ನಿಕಾ ಜ್ಯುವೆಲ್ಲರ್ಸ್ ಮಾಲೀಕ ಪ್ರದೀಪ್ ವಿತರಿಸಿದರು. ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ. ಸುಧೀರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಮಿತಿಯ ಅಧ್ಯಕ್ಷೆ ಶಾರದಾ ರಾಮನ್ ಕಾರ್ಯಕ್ರಮ ನಿರೂಪಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಎಸ್. ಸುರೇಶ್ ಈ ಸಂದರ್ಭ ಹಾಜರಿದ್ದರು.

ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹದೇವಪೇಟೆಯ ನಿವಾಸಿಗಳಾದ ಅನಿತಾ, ಸುಷ್ಮಾ, ನಳಿನಿ, ಪೂರ್ಣಿಮಾ, ರೂಪಾ ಇವರು ಬಹುಮಾನ ಸ್ವೀಕರಿಸಿದರು. ಈ ಸಂದರ್ಭ ದೇವಾಲಯದ ಬಹುಮಾನ ದಾನಿಗಳಾದ ತೇಜ್‍ರಾಜ್ ಹಾಗೂ ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು.