ಹೆಬ್ಬಾಲೆ, ಏ. 10: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಮೀಪದ ಹನುಮಂತಪುರ (ಸೂಳೆಕೋಟೆ) ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಏರ್ಪಡಿಸಿದ್ದ ಶ್ರೀ ಆಂಜನೇಯ ಸ್ವಾಮಿಯ ವಾರ್ಷಿಕ ಬ್ರಹ್ಮ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.

ರಥೋತ್ಸವದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರೀ ಆಂಜನೇಯ ದೇವಸ್ಥಾನಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪ ಹಾಗೂ ಮಹಿಳೆಯರು ತಮ್ಮ ತಮ್ಮ ಮನೆಯಂಗಳದಲ್ಲಿ ರಂಗೋಲಿಯ ಚಿತ್ತಾರ ಬಿಡಿಸಿದ್ದರು.

ದೇವಸ್ಥಾನದ ಪ್ರಧಾನ ಅರ್ಚಕ ಎಸ್.ಪಿ. ಸೋಮಪ್ಪ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ನಡೆದವು. ಕಾವೇರಿ ನದಿಗೆ ಪೂಜೆ ಸಲ್ಲಿಸಿ ವಿವಿಧ ಪುಷ್ಪ ಮತ್ತು ಭಾಗಧ್ವಜಗಳಿಂದ ಸಿಂಗರಿಸಲಾಗಿದ್ದ ರಥಕ್ಕೆ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.

ಮಹಾಮಂಗಳಾರತಿ ನೆರವೇರಿಸಿ ಬೆಟ್ಟದಪುರ ಸಲಿಲಾಖ ಮಠದ ಶ್ರೀ ಚನ್ನಬಸವದೇಶಿ ಕೇಂದ್ರ ಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳು ರಥವನ್ನು ಎಳೆಯುತ್ತ ಜೈ.ಜೈ ಹನುಮ ಎಂಬ ಷೋಷಣೆಗಳನ್ನು ಕೂಗುತ್ತ ತಮ್ಮ ಭಕ್ತಿ ಮೆರೆದರು.

ಕಾವೇರಿ ನದಿಯಿಂದ ಶ್ರೀ ಆಂಜನೇಯ ದೇವಸ್ಥಾನದವರೆಗೆ ರಥದ ಮೆರವಣಿಗೆ ನಡೆಸಲಾಯಿತು. ಮೆರವಣೆಗೆ ಸಂದರ್ಭ ನೆರೆದಿದ್ದ ಭಕ್ತಾದಿಗಳು ಹೂ ಜವನವನ್ನು ರಥಕ್ಕೆ ಎಸೆಯುವ ಮೂಲಕ ಭಕ್ತಿ ಅರ್ಪಿಸಿದರು. ಹರಕೆ ಹೊತ್ತ ಭಕ್ತಾದಿಗಳು, ಅಂಗಡಿ ವ್ಯಾಪಾರಿಗಳು ರಥೋತ್ಸವದ ಸಂದರ್ಭ ಈಡುಗಾಯಿ ಒಡೆದು ಪಾನಕ ವಿತರಿಸಿದರು.

ದೇವಸ್ಥಾನ ಸಮಿತಿಯ ಕಾರ್ಯಾಧ್ಯಕ್ಷ ಹೆಚ್. ಶಿಂಗ್ರಿಶೆಟ್ಟರು, ಕಾರ್ಯದರ್ಶಿ ಎಂ.ಕೆ. ಶಿವರಾಮ ಹಾಗೂ ಖಜಾಂಚಿ ಎಸ್.ಎ. ಕುಮಾರಸ್ವಾಮಿ ನೇತೃತ್ವದಲ್ಲಿ ರಥೋತ್ಸವದ ಪೂಜಾ ಕಾರ್ಯಗಳು ನಡೆದವು.

ರಥೋತ್ಸವಕ್ಕೆ ಕೊಡಗು ಮತ್ತು ಹಾಸನ ಜಿಲ್ಲೆಗಳ ಗಡಿ ಪ್ರದೇಶದ ಜನರು ಸೇರಿದಂತೆ ಪಿರಿಯಾಪಟ್ಟಣ ತಾಲೂಕಿನಾದ್ಯಂತ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಆಂಜನೇಯ ಸ್ವಾಮಿಯ ಸಹೋದರಿ ದೇವಸ್ಥಾನವಾದ ಶ್ರೀ ದೆಂಡಮ್ಮ ದೇವಸ್ಥಾನದಲ್ಲಿ ಅರ್ಚಕ ರಾಮಚಂದ್ರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ದೇವಾಲಯದ ಅಧ್ಯಕ್ಷ ಹೆಚ್.ಬಿ. ನಾಗೇಶ್ ಹಾಗೂ ಹೆಚ್.ಬಿ. ಚಂದ್ರಶೇಖರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು.

ಹರಕೆ ಹೊತ್ತ ಭಕ್ತಾದಿಗಳು ಕಾವೇರಿ ನದಿಯಲ್ಲಿ ಕೇಶ ಮುಂಡನ ಮಾಡಿಸಿದರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ದಾನಿಗಳು ಹಾಗೂ ಸಮಿತಿ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದರು.

ಬೆಟ್ಟದಪುರ ಪೊಲೀಸ್ ಠಾಣಾಧಿಕಾರಿ ಬಾಲು ನೇತೃತ್ವದಲ್ಲಿ ರಥೋತ್ಸವಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.