ಗೋಣಿಕೊಪ್ಪ ವರದಿ, ಏ. 9: ಮನು ಸೋಮಯ್ಯ ಅವರು ಮುನ್ನಡೆಸುತ್ತಿರುವ ರೈತಸಂಘಕ್ಕೆ ನಾನು ರಾಜೀನಾಮೆ ನೀಡಿ ಹೊರ ಬಂದಿದ್ದು, ಉಚ್ಚಾಟಿಸಲಾಗಿದೆ ಎಂದು ತಪ್ಪು ಹೇಳಿಕೆ ನೀಡಿದ್ದಾರೆ ಪ್ರೊ. ನಂಜುಂಡಸ್ವಾಮಿ ರೈತ ಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ ತಿಳಿಸಿದ್ದಾರೆ.
ಚುನಾವಣೆ ಮೂಲಕ ಪದಾಧಿಕಾರಿಗಳ ಆಯ್ಕೆ ಮಾಡಲು ರೈತಸಂಘದಲ್ಲಿ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿ ಜನವರಿ 25 ರಂದು ಚುನಾವಣೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಇದನ್ನು ವಿರೋಧಿಸಿ ನಾನು ಹೊರ ಬಂದಿದ್ದೆ. ಇದೀಗ ಪ್ರೊ. ನಂಜುಂಡಸ್ವಾಮಿ ರೈತ ಸಂಘದಲ್ಲಿ ನಾನು ತೊಡಗಿಕೊಂಡದನ್ನು ಸಹಿಸಲಾಗದೆ ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಜನರಲ್ಲಿ ಗೊಂದಲ ಉಂಟುಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಹಾಸಭೆಯಲ್ಲಿ ಲೆಕ್ಕಪತ್ರ ಮಂಡಿಸುವಂತೆ ಒತ್ತಾಯಿಸಿದ್ದೆ. ಇದರಿಂದ ಮುಜುಗರಗೊಂಡು ನನ್ನನ್ನು ಸಂಘದಿಂದ ಹೊರ ಹಾಕಲು ಜಿಲ್ಲಾ ಸಂಚಾಲಕ ಸ್ಥಾನಕ್ಕೆ ಬ್ಯಾಲೆಟ್ ಪೇಪರ್‍ನಲ್ಲಿ ನನ್ನ ಹೆಸರನ್ನು ಅವರೇ ಸೇರಿಸಿಕೊಂಡು ನನ್ನನ್ನು ಸೋಲಿಸುವ ಹುನ್ನಾರ ನಡೆಸಿದರು. ನಾನು ಚುನಾವಣೆಯಲ್ಲಿ ಪಾಲ್ಗೊಳ್ಳದೆ ಹೊರ ಬಂದಿದ್ದೇನೆ. ಅಧಿಕೃತವಾಗಿ ಪ್ರೊ. ನಂಜುಂಡಸ್ವಾಮಿ ರೈತ ಸಂಘದಲ್ಲಿ ತೊಡಗಿಕೊಂಡಿದ್ದೇನೆ ಎಂದರು.
ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕೊಡಗು ರೈತ ಸಂಘದ ಅಧ್ಯಕ್ಷನಾಗಿ ನೇಮಕಗೊಂಡು ಮನು ಸೋಮಯ್ಯ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಅನಧಿಕೃತವಾಗಿ ಅಧ್ಯಕ್ಷ ಎಂದು ಹೇಳಿಕೊಂಡು ಮುನ್ನಡೆಯುತ್ತಿರುವದು ಕಾನೂನು ಬಾಹಿರ ಎಂದು ಹೇಳಿದರು.
ಚೆಪ್ಪುಡಿರ ಮಹೇಶ್ ಮಾತನಾಡಿ, ರೈತ ಸಂಘದಿಂದ ಇಲ್ಲಿಯವರೆಗೆ ಯಾವ ಪ್ರಯೋಜನವೂ ರೈತರಿಗೆ ಲಭಿಸಿಲ್ಲವೆಂದರು. ಆದೇಂಗಡ ಅಶೋಕ್ ಮಾತನಾಡಿ, ಮನು ಸೋಮಯ್ಯ ಅವರು ಮುನ್ನಡೆಸುತ್ತಿರುವ ಸಂಘದ ಚುನಾವಣೆ ಕಾನೂನು ಬಾಹಿರ. ಕ್ಯಾಲೆಂಡರ್ ನಿಯಮದಂತೆ ಚುನಾವಣೆ ಪತ್ರ ತಲುಪಿಸಿ ಚುನಾವಣೆ ನಡೆಸಬೇಕಿತ್ತು. ಆದರೆ, ಇಲ್ಲಿ ದುರುದ್ದೇಶದಿಂದ ಆಗಿನ ಸಂಚಾಲಕರಾಗಿದ್ದ ಚಿಮ್ಮಂಗಡ ಗಣೇಶ್ ಅವರನ್ನು ಹೊರ ಹಾಕಲು ಚುನಾವಣೆ ನಾಟಕ ಮಾಡಿದ್ದಾರೆ ಎಂದು ಆರೋಪಿಸಿದರು. ನಾಮಪತ್ರ ಸ್ವೀಕಾರ, ಹಿಂಪಡೆಯಲು ಪ್ರತ್ಯೇಕವಾಗಿ ಚುನಾವಣಾಧಿಕಾರಿಯನ್ನು ನೇಮಿಸಿರಲಿಲ್ಲ. ಗಣೇಶ್ ಅವರನ್ನು ಅವಮಾನಿಸುವ ಉದ್ದೇಶದಿಂದ ಚುನಾವಣೆ ಎಂಬ ಕುಕೃತ್ಯ ನಡೆಸಲಾಗಿತ್ತು ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಗುಡಿಯಂಗಡ ಪೂವಪ್ಪ, ಹಾಗೂ ಬಾದುಮಂಡ ಮಹೇಶ್ ಇದ್ದರು.