* ಅತ್ಯಧಿಕ ಮತಗಳಿಂದ ಗೆಲವಿನ ಭರವಸೆ * ಶಾಸಕ ಕೆ.ಜಿ. ಬೋಪಯ್ಯ ವಿಶ್ವಾಸ

ಮಡಿಕೇರಿ, ಏ. 9: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರ ಅಭ್ಯರ್ಥಿ ಹಾಗೂ ಹಾಲೀ ಸಂಸದ ಪ್ರತಾಪ್ ಸಿಂಹ ಅವರು, ಪ್ರಸಕ್ತ ನಡೆಯಲಿರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲವು ಸಾಧಿಸುವ ಭರವಸೆಯೊಂದಿಗೆ, ಈಗಾಗಲೇ ಪಕ್ಷದ ಕಾರ್ಯಕರ್ತರು ಮನೆ ಮನೆ ಸಂಪರ್ಕಿಸಿ ಮತದಾರರ ಗಮನ ಸೆಳೆದಿದ್ದಾರೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ವಿಶ್ವಾಸದ ನುಡಿಯಾಡಿದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡುತ್ತಿದ್ದ ಅವರು, ದೇಶದಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಗೊಳ್ಳಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕೊಡಗು-ಮೈಸೂರು ಕ್ಷೇತ್ರದಲ್ಲಿ ಯುವ ಮತದಾರರ ಸಹಿತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಒಲವು ವ್ಯಕ್ತಪಡಿಸುತ್ತಿದ್ದು, ಜನ ಸಾಮಾನ್ಯರಿಗೆ ಕೇಂದ್ರ ಸರಕಾರದ ಕೆಲಸಗಳನ್ನು ತಲಪಿಸುವಲ್ಲಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ಬೋಪಯ್ಯ ನೆನಪಿಸಿದರು. ಈ ಸಂಬಂಧ ಒಂದು ಸುತ್ತಿನ ಸಂಪರ್ಕ ಪೂರ್ಣಗೊಂಡು ಎಲ್ಲೆಡೆ ಬಿಜೆಪಿಯ ಕಡೆ ಒಲವು ಮೂಡುವಂತಾಗಿದೆ ಎಂದರು.

ಬಿಜೆಪಿ ಅಭ್ಯರ್ಥಿಯಾಗಿರುವ ಪ್ರತಾಪ್‍ಸಿಂಹ ಈಗಾಗಲೇ ಸಂಸದರಾಗಿ ಕೇಂದ್ರ ಸರಕಾರದ ಹಲವಷ್ಟು ಮಹತ್ವಪೂರ್ಣ ಯೋಜನೆಗಳನ್ನು ಜನರಿಗೆ ತಲಪಿಸಿದ್ದಾರೆ. ಮುಂದೆಯೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುವಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲವು ಸುಲಭ ಸಾಧ್ಯವಾಗಲಿದೆ ಎಂದು ಅವರು ವ್ಯಾಖ್ಯಾನಿಸಿದರು.

ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಅಭ್ಯರ್ಥಿ ಪ್ರತಾಪ್‍ಸಿಂಹ ಕೂಡ ಶಾಸಕರ ಜತೆಗೂಡಿ ಪ್ರವಾಸ ಕೈಗೊಂಡಿರುವದಾಗಿ ಕೆ.ಜಿ. ಬೋಪಯ್ಯ ಉಲ್ಲೇಖಿಸಿದರು. ಪಕ್ಷದ ಕಾರ್ಯಕರ್ತರಲ್ಲದೆ ಸಾಮಾನ್ಯ ಜನರಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಅಭಿಲಾಷೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಕೊಡಗು-ಮೈಸೂರು ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಅಲೆ ಕಂಡುಬರುತ್ತಿದೆ ಈ ಕ್ಷೇತ್ರದಾದ್ಯಂತ ಮೋದಿ ಅಲೆ ಸಾಕಷ್ಟು ಕಂಡುಬರುತ್ತಿದ್ದು, ಬಿಜೆಪಿ ಅಭ್ಯರ್ಥಿ ಗೆಲವು ನಿಚ್ಚಳವಾಗಿದೆ. ಅಭ್ಯರ್ಥಿ ಘೋಷಣೆಗೆ ಮುನ್ನವೇ ಬಿಜೆಪಿ ಕಾರ್ಯಕರ್ತರು ಮತದಾರರ ಬಳಿ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿದ್ದರು. ಇದೀಗ ಅಭ್ಯರ್ಥಿಯೊಂದಿಗೂ ಜಿಲ್ಲೆಯಾದ್ಯಂತ ಮತದಾರರನ್ನು ಭೇಟಿಯಾಗಿ ಮತ ಕೇಳಲಾಗಿದೆ. ಎರಡೂ ಕ್ಷೇತ್ರಗಳಲ್ಲಿಯೂ ಉತ್ತಮ ಸ್ಪಂದನ ಜನರಿಂದ ವ್ಯಕ್ತವಾಗಿದೆ. ಹೀಗಾಗಿ ಮೋದಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗುವದರಲ್ಲಿ ಸಂಶಯವಿಲ್ಲ. ಅಂತೆಯೇ ಈ ಕ್ಷೇತ್ರದಿಂದ ಪ್ರತಾಪ್ ಸಿಂಹ ಸಂಸದರಾಗಿ ಚುನಾಯಿತ ರಾಗುವದರಲ್ಲಿಯೂ ಅನುಮಾನವಿಲ್ಲ ಎಂದರು.