ಮಡಿಕೇರಿ, ಮಾ. 9: ಜಿಲ್ಲೆಯ ಜನತೆಗೆ, ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಈಜು ಕಲಿಯಲು ಹಾಗೂ ಈಜು ಪಟುಗಳಿಗೆ ಅಭ್ಯಸಿಸಲು ಅನುಕೂಲವಾಗಲೆಂಬ ಉದ್ದೇಶದೊಂದಿಗೆ ನಿರ್ಮಾಣ ಗೊಂಡಿರುವ ಈಜುಕೊಳದ ಕಾರ್ಯಚಟುವಟಿಕೆ ಸ್ಥಗಿತಗೊಂಡಿದೆ. ಮಳೆಗಾಲದಲ್ಲಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ದುರಸ್ತಿಯ ನೆಪದಲ್ಲಿ ಈಜುಕೊಳದ ಚಟುವಟಿಕೆಯನ್ನು ನಿಲ್ಲಿಸಲಾಗಿದ್ದು, ಸದ್ಯಕ್ಕೆ ಕೊಳ ಖಾಲಿಯಾಗಿದೆ...ಕ್ರೀಡಾ ಜಿಲ್ಲೆ ಎಂಬ ಖ್ಯಾತಿ ಹೊಂದಿರುವ ಪುಟ್ಟ ಕೊಡಗು ಜಿಲ್ಲೆಗೆ ಕ್ರೀಡಾ ಕ್ಷೇತ್ರಕ್ಕೆ ಸರಕಾರದಿಂದ ಸಿಗುತ್ತಿರುವ ಅನುದಾನ ಅಷ್ಟಕಷ್ಟೇ ಎನ್ನಬಹುದು. ಅಂತಹದರಲ್ಲಿ ಜಿಲ್ಲೆಗೆ ಈಜುಕೊಳ ಸಿಕ್ಕಿರುವದು ಪುಣ್ಯ ಎನ್ನಬಹುದು. ಈಜು ಕೂಡ ಒಂದು ಕ್ರೀಡೆಯಾಗಿರುವದರಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ಜಿಲ್ಲಾ ಕ್ರೀಡಾಂಗಣದ ಬಳಿ ಈಜುಕೊಳ ನಿರ್ಮಿಸಲಾಗಿದೆ. ಆದರೆ ಇದರಿಂದ ಸಿಗುತ್ತಿರುವ ಪ್ರಯೋಜನ ಮಾತ್ರ ಅಷ್ಟಕಷ್ಟೇ ಎಂಬಂತಾಗಿದೆ.

ಸರಕಾರದಿಂದ ಬಿಡುಗಡೆಗೊಂಡ ರೂ. 2.61 ಕೋಟಿ ವೆಚ್ಚದಲ್ಲಿ 2012ರಲ್ಲಿ ಶಂಕುಸ್ಥಾಪನೆಗೊಂಡು ಕಾಮಗಾರಿ ಕುಂಟುತ್ತಾ ಸಾಗಿ 2014ರಲ್ಲಿ ಉದ್ಘಾಟನೆಗೊಂಡಿತು. ನಂತರದಲ್ಲಿ ಕಳೆದ ನಾಲ್ಕು ವರ್ಷ ಗಳಿಂದ ಈ ಕೊಳ ಕಾರ್ಯನಿರ್ವ ಹಿಸುತ್ತಿದೆಯಾದರೂ ಸಮರ್ಪಕವಾಗಿ ಪ್ರಯೋಜನಕ್ಕೆ ಬರುವದು ಕೇವಲ 3-4 ತಿಂಗಳು ಮಾತ್ರ. ಅದೂ ಬೇಸಿಗೆಯ ಮಕ್ಕಳ ರಜಾ ದಿನಗಳಲ್ಲಿ...

ಕಳೆದ ಮಳೆಗಾಲದಲ್ಲಿ ಭಾರೀ ಮಳೆ ಸುರಿದ ಸಂದರ್ಭ ಈಜು ಕೊಳದೊಳಗೆ ಅಂತರ್‍ಜಲ ಉಕ್ಕಿ ತುಂಬಿ ಹೋಗಿ ಕೊಳದಲ್ಲಿ ಅಳವಡಿಸಲಾಗಿದ್ದ ಟೈಲ್ಸ್‍ಗಳಿಗೆ ಹಾನಿಯಾಗಿತ್ತು. ಆದರೆ ಮಳೆಗಾಲ ಕಳೆದು 6-7 ತಿಂಗಳು ಆದರೂ ಇದುವರೆಗೆ ದುರಸ್ತಿಪಡಿಸದೆ ಇದೀಗ ಬೇಸಿಗೆ ಬಂದಾಗ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಪ್ರಸ್ತುತ ಶಾಲಾ ಮಕ್ಕಳಿಗೆ ರಜಾ ದಿನಗಳಾಗಿದ್ದು, ಪ್ರತಿನಿತ್ಯ ಹತ್ತಾರು ಮಕ್ಕಳು ಈಜು ಕಲಿಯಲೆಂದು ಕ್ರೀಡಾ ಇಲಾಖೆ ಪ್ರಾಂಗಣಕ್ಕೆ ಎಡತಾಕಿ ಕೊಳದ ಬಾಗಿಲಿಗೆ ಜಡಿದ ಬೀಗವನ್ನು ಕಂಡು ನಿರಾಸೆಯಿಂದ ಹಿಂತಿರುಗುತ್ತಿರುವದು ಸಾಮಾನ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಸಹಾಯಕಿ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ಅವರು, ದುರಸ್ತಿ ಕಾರ್ಯ ನಡೆಯುತ್ತಿದೆ. ಹದಿನೈದು ದಿನಗಳಲ್ಲಿ ಈಜುಕೊಳ ಉಪಯೋಗಕ್ಕೆ ಮುಕ್ತವಾಗಲಿದೆ ಎಂದು ಹೇಳುತ್ತಾರೆ.

ಆದರೆ, ಇದೀಗ ಮಳೆ ಸುರಿಯಲಾರಂಭಿಸಿದೆ. ಏಪ್ರಿಲ್ ತಿಂಗಳು ಕಳೆದರೆ ಮೇ ತಿಂಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲಿಗೆ ಈ ಸಾಲಿನ ಬೇಸಿಗೆ ಮುಗಿ ಯಲಿದ್ದು, ಮಕ್ಕಳಿಗೆ ಈಜಾಡಲು ಸಾಧ್ಯವಾಗಲಿದೆಯೇ ದೇವರೇ ಬಲ್ಲ...

ಕ್ರೀಡಾಂಗಣ, ಈಜುಕೊಳ, ಒಳಾಂಗಣ ಕ್ರೀಡಾಂಗಣ ಇವುಗಳ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯೊಂದಿದ್ದು, ಈ ಸಮಿತಿ ಇತ್ತ ತುರ್ತು ಗಮನ ಹರಿಸಬೇಕಿದೆ. -ಸಂತೋಷ್