ಸೋಮವಾರಪೇಟೆ, ಏ. 9: ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಾನಗಲ್ಲು ಶೆಟ್ಟಳ್ಳಿ ಗ್ರಾಮ ಸಂಪರ್ಕಿಸುವ ಪ್ರಮುಖ ರಸ್ತೆ ಕಳೆದ ಹಲವಾರು ದಶಕಗಳಿಂದ ದುರಸ್ತಿ ಕಾಣದೇ ಇರುವದರಿಂದ ಬೇಸತ್ತು ಪ್ರಸಕ್ತ ನಡೆಯುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಸುಗ್ಗಿದೇವನ ಬನದ ಆವರಣದಲ್ಲಿ ಸಭೆ ಸೇರಿದ ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ತೀರ್ಮಾನ ಕೈಗೊಂಡರು.

ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಸಂಬಂಧಿಸಿದ ಇಲಾಖೆಯ ಗಮನ ಸೆಳೆದರೂ ಯಾವದೇ ಪ್ರಯೋಜನ ವಾಗಿಲ್ಲ. ಈ ಹಿನ್ನೆಲೆ ಚುನಾವಣೆ ಯಲ್ಲಿ ಮತದಾನ ಮಾಡದೇ ಸರ್ಕಾರ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲು ತೀರ್ಮಾನಿಸ ಲಾಯಿತು. ಸಭೆಯಲ್ಲಿ ಗ್ರಾಮಾ ಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಜೆ. ಸುರೇಶ್, ಉಪಾಧ್ಯಕ್ಷ ಎಲ್.ಜೆ. ದೊಡ್ಡಯ್ಯ, ಕಾರ್ಯದರ್ಶಿ ಲಕ್ಷ್ಮಣ, ಪ್ರಮುಖರಾದ ರವಿ, ವೆಂಕಟೇಶ್, ಎಂ.ಕೆ. ರಾಮಚಂದ್ರ, ಚಂದ್ರಶೇಖರ್, ಪ್ರೀತಮ್, ವಿಠಲ, ಅಪ್ಪಯ್ಯ, ಪೊನ್ನಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.