ಮಡಿಕೇರಿ, ಏ. 9: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕೊಡಗಿನ ಜನತೆಯು ಬದಲಾವಣೆ ಬಯಸಿದ್ದು, ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಮೇಲ್ಮನೆ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಭವಿಷ್ಯ ನುಡಿದರು. ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಉಭಯ ಪಕ್ಷಗಳ ಮೈತ್ರಿಯಿಂದಾಗಿ ಕೊಡಗು - ಮೈಸೂರು ಕ್ಷೇತ್ರ ಅಭ್ಯರ್ಥಿಯ ಗೆಲವು ಸುಲಭವಾಗಲಿದೆ ಎಂದು ಪ್ರತಿಪಾದಿಸಿದರು.

ಹಾಲಿ ಸಂಸದ ಪ್ರತಾಪ್ ಸಿಂಹ ಕೊಡಗಿನ ಯಾವದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲವೆಂಬ ಅಸಮಾಧಾನ ಜನತೆಯಲ್ಲಿದ್ದು, ಕಾಳುಮೆಣಸು ರಫ್ತು ನೀತಿಯಿಂದ ಬೆಳೆಗಾರರ ಸಂಕಷ್ಟಕ್ಕೂ ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಅವರು ಕಾಳಜಿ ತೋರಲಿಲ್ಲವೆಂದು ವೀಣಾ ಅಚ್ಚಯ್ಯ ಬೊಟ್ಟು ಮಾಡಿದರು. ಕೊಡಗಿನಲ್ಲಿ ಅತಿವೃಷ್ಟಿ ಸಂದರ್ಭ ಮತ್ತು ಇತರ 5 ವರ್ಷಗಳಲ್ಲಿ ಯಾವ ರೀತಿ ಸ್ಪಂದಿಸಿದ್ದಾರೆ ಎಂಬ ಪ್ರಶ್ನೆ ಜನತೆಯಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಯುಪಿಎ ಸರಕಾರದ ಆಡಳಿತದಲ್ಲಿ ಪೆಟ್ರೋಲ್ - ಡೀಸೆಲ್ ಬೆಲೆಯೊಂದಿಗೆ ಅನಿಲ ಬೆಲೆ ನಿಯಂತ್ರಣ ಇದ್ದುದಾಗಿ ಸಮರ್ಥಿಸಿದ ಅವರು, ಬಿಜೆಪಿ ಸರಕಾರದಿಂದ ಎಲ್ಲ ಬೆಲೆಗಳು ಏರಿಕೆಯೊಂದಿಗೆ ಜನತೆ ಸಂಕಷ್ಟ ಅನುಭವಿಸುವಂತಾಗಿದೆ ಎಂದರು.

ಉತ್ತಮ ವಾತಾವರಣ : ಕೊಡಗಿನ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರವಾಸ ಸಂದರ್ಭ ತಮ್ಮ ಅಭ್ಯರ್ಥಿ ಪರ ಉತ್ತಮ ವಾತಾವರಣ ಕಂಡು ಬಂದಿದೆ ಎಂದು ವೀಣಾ ಅಚ್ಚಯ್ಯ ನುಡಿದರು.

ಜೀವಿಜಯ ಸಮ್ಮತಿ: ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಅವರನ್ನು ಕಾಂಗ್ರೆಸ್ ವರಿಷ್ಠರು ಖುದ್ದು ಭೇಟಿಯಾಗಿ ಮಾತುಕತೆ ನಡೆಸಿದ್ದು, ಆ ಪಕ್ಷದ ಮತಗಳನ್ನು ವಿಜಯಶಂಕರ್ ಅವರಿಗೆ ಕೊಡಿಸುವಲ್ಲಿ ಶ್ರಮಿಸುವ ಭರವಸೆ ವ್ಯಕ್ತಪಡಿಸಿದ್ದು, ತಮಗೆ ಈ ಬಗ್ಗೆ ಆತ್ಮವಿಶ್ವಾಸವಿದೆಯೆಂದು ಮೇಲ್ಮನೆ ಸದಸ್ಯೆ ನುಡಿದರು.

ಕೇಂದ್ರದಲ್ಲಿ ಯುಪಿಎ ಸರಕಾರ ಬರಲಿದೆ ಎಂದು ವಿಶ್ವಾಸದ ನುಡಿಯಾಡಿದ ಅವರು, ಕೊಡಗಿನ ಮತದಾರರು ಕೂಡ ಈ ಚುನಾವಣೆಯಲ್ಲಿ ಬದಲಾವಣೆ ಬಯಸಿರುವದು ನಿಶ್ಚಿತವೆಂದು ವ್ಯಾಖ್ಯಾನಿಸಿದರು.