ಮಡಿಕೇರಿ, ಏ. 9 : ಚುನಾವಣಾ ಕರ್ತವ್ಯಕ್ಕೆ ನಿರ್ಲಕ್ಷ್ಯತನದಿಂದ ವರ್ತಿಸಿ ಈ ಕೆಲಸಕ್ಕೆ ನಿಯೋಜಿತರಾಗಿದ್ದ. ಮತ್ತೊಬ್ಬ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿರುವ ಪ್ರಕರಣ ನಡೆದಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿದ ವರದಿ ಹಾಗೂ ಪತ್ರದ ಆಧಾರದಲ್ಲಿ ಹುಣಸೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಕೊಡಗಿನಲ್ಲಿ ಪ್ರಭಾರ ಆರ್‍ಟಿಓ ಜವಾಬ್ದಾರಿ ಹೊಂದಿದ್ದ ಜೆ.ಪಿ. ಗಂಗಾಧರ್ ಈ ಶಿಸ್ತು ಕ್ರಮಕ್ಕೆ ಒಳಗಾಗಿದ್ದಾರೆ.ಚುನಾವಣಾ ಕರ್ತವ್ಯಕ್ಕೆ ಪೆರುಂಬಾಡಿ ಗೇಟ್‍ನಲ್ಲಿ ನಿಯೋಜಿತರಾಗಿದ್ದ ಮತ್ತೊಬ್ಬ ಅಧಿಕಾರಿ ಹಾತೂರು ಗ್ರಾ.ಪಂ. ಪಿಡಿಓ ಆದ ಕೆ.ಎಂ. ತಿಮ್ಮಯ್ಯ ಅವರು ಚೆಕ್‍ಪೋಸ್ಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಲ್ಲಿಗೆ ಆಗಮಿಸಿದ್ದ ಗಂಗಾಧರ್ ಕರ್ತವ್ಯಕ್ಕೆ ಅಡ್ಡಿಪಡಿಸಿ ದೈಹಿಕ ಹಲ್ಲೆ ನಡೆಸಿದ್ದು, ಈ ಬಗ್ಗೆ ಕಾನೂನು ಕ್ರಮಕ್ಕೆ ಉನ್ನತಾಧಿಕಾರಿಗಳಿಗೆ ಮನವಿ ಮಾಡಿದರು. ಮಾರ್ಚ್ 28 ರಂದು ನಿಯೋಜಿತ ಅಧಿಕಾರಿ ಹಾಗೂ ತಂಡದ ಇತರರನ್ನು ಲೆಕ್ಕಿಸದೆ ಇವರೇ ವಾಹನ ತಪಾಸಣೆಗಿಳಿದು ಜನರೊಂದಿಗೂ ಅಸಭ್ಯವಾಗಿ ವರ್ತಿಸಿ ಸಂಚಾರಕ್ಕೂ ಅಡ್ಡಿಪಡಿಸಿದ್ದರೆನ್ನಲಾಗಿದೆ.
ಗಂಗಾಧರ್ ಹುಣಸೂರು ಕಚೇರಿಯ ಅಧಿಕಾರಿಯಾಗಿದ್ದು, ಮಡಿಕೇರಿ ಕಚೇರಿಗೆ ಪ್ರಭಾರವಾಗಿ ನಿಯೋಜಿತರಾಗಿದ್ದರು. ಇದೀಗ ಈ ದೂರಿನಂತೆ ಈ ಅಧಿಕಾರಿಯ ವಿರುದ್ಧದ ವಿಚಾರಣೆಯನ್ನು ಬಾಕಿ ಇಟ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಹಾಗೂ ಇವರ ಪ್ರಭಾರ ಹುದ್ದೆಯ ವ್ಯವಸ್ಥೆಯನ್ನು ಇಲ್ಲಿಂದ ರದ್ದುಗೊಳಿಸಿ ಹುದ್ದೆಯ ಲೀನ್ ಅನ್ನು ಹುಣಸೂರು ಕಚೇರಿಯಲ್ಲಿಯೇ ಮುಂದುವರಿಸಿ ಸಾರಿಗೆ ಆಯುಕ್ತರಾದ ವಿ.ಪಿ. ಇಕ್ಕೇರಿ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಕ್ರಮಕ್ಕೆ ಒಳಗಾದ ಅಧಿಕಾರಿ ಗಂಗಾಧರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿತ್ತಾದರೂ ಚುನಾವಣೆ ಚೆಕ್‍ಪೋಸ್ಟ್‍ಗಳಲ್ಲಿ ವಾಹನ ತಪಾಸಣೆಗೆ ನಿರ್ದೇಶನ ನೀಡಲಾಗಿರಲಿಲ್ಲ. ಆದರೂ ಅಧಿಕಾರ ವ್ಯಾಪ್ತಿ ಮೀರಿ ಇವರು ವರ್ತಿಸಿರುವದು ಸಮಂಜಸವಲ್ಲವೆಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ನಾಗರಿಕ ಸೇವಾ (ನಡತೆ) ನಿಯಮ ಉಲ್ಲಂಘನೆ ಕಾಯ್ದೆ ಅನ್ವಯ ಈ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ.