ಮಡಿಕೇರಿ, ಏ. 9: ಎಮ್ಮೆಮಾಡು ಜಮಾಅತ್ನ ಹಿಂದಿನ ಆಡಳಿತದ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಇತ್ತೀಚೆಗೆ ಕೆಲವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿ ರುವ ಈ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದಾಖಲೆಗಳ ಸಹಿತ ಸತ್ಯವನ್ನು ಸಾಬೀತು ಪಡಿಸಲು ಸಿದ್ಧ ಇರುವದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಾಖಲೆಗಳ ಸಹಿತ ಮಾತನಾಡಿದ ಜಮಾಅತ್ನ ಮೊಹಮ್ಮದ್ ಮುಸ್ಲಿಯಾರ್, ಜಮಾಅತ್ ಚುನಾವಣೆಯ ಸೋಲಿನ ಹಿನ್ನೆಲೆ ಇಸ್ಮಾಯಿಲ್ ಹಾಗೂ ಸಂಗಡಿಗರು ಹುರುಳಿಲ್ಲದ ಆರೋಪಗಳನ್ನು ಮಾಡಿದ್ದಾರೆ. ನಮ್ಮ ಆಡಳಿತ ಮಂಡಳಿ ಅಧಿಕಾರ ದಲ್ಲಿದ್ದ ಸಂದರ್ಭ ಪ್ರತಿ ವರ್ಷ ಲೆಕ್ಕಪರಿಶೋಧನಾ ಕಾರ್ಯ ಸಮರ್ಪಕವಾಗಿ ನಡೆದಿದ್ದು, ಇದರ ಮುದ್ರಿತ ಪುಸ್ತಕ ಜಮಾಅತ್ ಸದಸ್ಯರುಗಳಿಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಜಮಾಅತ್ನ ಆರು ರಶೀದಿ ಪುಸ್ತಕಗಳು ನಾಪತ್ತೆಯಾಗಿದೆ ಎನ್ನುವ ಆರೋಪವಿದೆ, ಆದರೆ ಆ ರಶೀದಿ ಪುಸ್ತಕಗಳು ನಾಪತ್ತೆ ಯಾಗುವ ಮೊದಲೇ ಪುಸ್ತಕದಲ್ಲಿದ್ದ ವ್ಯವಹಾರದ ಎಲ್ಲಾ ಮಾಹಿತಿಗಳನ್ನು ಜಮಾಅತ್ ಪುಸ್ತಕದಲ್ಲಿ ನಮೂದಿಸ ಲಾಗಿದ್ದು, ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ ಎಂದರು. ಜಮಾಅತ್ನ 2017ರ ಮಹಾಸಭೆಯಲ್ಲಿ 3.60 ಲಕ್ಷ ರೂಪಾಯಿಗಳ ಅವ್ಯವಹಾರವಾಗಿದೆ ಯೆಂದು ಆರೋಪಿಸಲಾಗಿತ್ತು. ಜಮಾಅತ್ ಕೋಶಾಧಿಕಾರಿಗಳಿಂದ ನಡೆದ ಸುಮಾರು ರೂ. 3.6 ಲಕ್ಷ ಅವ್ಯವಹಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಶಾಧಿಕಾರಿ ತಪ್ಪನ್ನು ಒಪ್ಪಿಕೊಂಡಿದ್ದು, ಅವರನ್ನು ಹುದ್ದೆಯಿಂದ ಅಮಾನತುಗೊಳಿಸ ಲಾಗಿದೆ ಎಂದರು. ಅಲ್ಲದೆ ದುರುಪಯೋಗಪಡಿಸಿಕೊಂಡಿರುವ ಹಣವನ್ನು ಕೋಶಾಧಿಕಾರಿ ಮರುಪಾವತಿಸಿದ್ದಾರೆ ಎಂದು ತಿಳಿಸಿದರು. ಜಮಾಅತ್ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ ಮಾತನಾಡಿ, 2016 ರ ಅವಧಿಯಲ್ಲಿ ತಾವು ಅಧಿಕಾರವನ್ನು ವಹಿಸಿಕೊಳ್ಳುವ ಸಂದರ್ಭ ಕಂಡು ಬಂದ ಲೆಕ್ಕಪತ್ರ ಗಳಲ್ಲಿನ ವ್ಯತ್ಯಾಸ, ಲೋಪಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಉಸ್ತುವಾರಿ ಸಚಿವರಿಗೆ ಈ ಹಿಂದೆಯೇ ದೂರನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಳೆದ ಮಹಾಸಭೆಯಲ್ಲಿ ತಮ್ಮ ವಿರುದ್ಧ ಆರೋಪ ಮಾಡುವ ಮೂಲಕ ವಕ್ಫ್ ಅಧ್ಯಕ್ಷರ ಸಮ್ಮುಖದಲ್ಲೆ ಅಶಾಂತಿ ಸೃಷ್ಟಿಸಿದ ಇಸ್ಮಾಯಿಲ್ ಬೆಂಬಲಿಗರು ಸಭೆ ನಡೆಯದಂತೆ ನೋಡಿಕೊಂಡಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಜಮಾಅತ್ ಮಾಜಿ ಸದಸ್ಯರುಗಳಾದ ಸಿ.ಎಂ. ಶಾದುಲಿ, ಪಿ.ಎಂ. ಹಂಸ ಹಾಗೂ ಸಿ.ಎಂ. ಮಾಹಿನೆ ಉಪಸ್ಥಿತರಿದ್ದರು.