ಮಡಿಕೇರಿ, ಏ. 9: ಲೋಕಾಸಭಾ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಶಸ್ವಿ ಮತದಾನಕ್ಕೆ ಜಿಲ್ಲಾಡಳಿತ ಈಗಾಗಲೇ ಎಲ್ಲಾ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತದಾರರಿಗೆ ಹಂಚಿರುವ ಗುರುತಿನ ಚೀಟಿಗಳಲ್ಲಿ ಕೆಲವರ ಬೇಜವಾಬ್ದಾರಿ ಯಿಂದ ಮಡಿಕೇರಿ ಮತದಾರರು ಹೊರ ರಾಜ್ಯ, ಜಿಲ್ಲೆ,ತಾಲೂಕುಗಳಿಗೆ ತೆರಳಿ ಮತದಾನ ಮಾಡುವಂತಾ ಅವ್ಯವಸ್ಥೆ ಮಾಡಲಾಗಿದೆ. ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಗಳನ್ನು ಅಂಗನವಾಡಿ ಶಿಕ್ಷಕಿಯರ ಮತ್ತು ಇತರ ಸಿಬ್ದಂದಿಗಳ ಮೂಲಕ ಮತದಾರರಿಗೆ ವಿತರಿಸಲಾಗುತ್ತಿದೆ. ಆದರೆ, ಮುದ್ರಿತ ಗುರುತಿನ ಚೀಟಿಗಳಲ್ಲಿ ಮಡಿಕೇರಿಯ ವಿವಿಧ ವಾರ್ಡ್‍ಗಳ ಮತದಾರರು ಹೊರ ರಾಜ್ಯಗಳಿಗೆ, ಜಿಲ್ಲೆಗಳಿಗೆ ಮತ್ತು ಕೊಡಗಿನ ವಿವಿಧ ಊರುಗಳಿಗೆ ತೆರಳಿ ಮತದಾನ ಮಾಡಬೇಕಾದ ಪರಿಸ್ಥಿತಿಯನ್ನು ಚುನಾವಣೆ ಕರ್ತವ್ಯ ಎಂದು ಹೇಳಿಕೊಳ್ಳುವ ಬೇಜವಾ ಬ್ದಾರಿಯುತ ಕೆಲ ಅಧಿಕಾರಿ-ಸಿಬ್ಬಂದಿಗಳು ನಿರ್ಮಿಸಿದ್ದಾರೆ.

ಮಡಿಕೇರಿ ನಗರದ 23 ವಾರ್ಡ್ ಗಳ ಮತದಾರರಿಗೆ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಗಳನ್ನು ಈಗಾಗಲೇ ಅಂಗನವಾಡಿ ಶಿಕ್ಷಕಿಯರ ಮೂಲಕ ತಹಶೀಲ್ದಾರ್ ಕಚೇರಿ ಯಿಂದ ವಿತರಿಸಲಾಗುತ್ತಿದೆ. ಆ ಎಲ್ಲ ಭಾವ ಚಿತ್ರವಿರುವ ಮತದಾರರ ಗುರುತಿನ ಚೀಟಿಗಳಲ್ಲಿ ‘21-ಮೈಸೂರು ಲೋಕಸಭಾ ಕ್ಷೇತ್ರ, 208 ವಿಧಾನಸಭಾ ಕ್ಷೇತ್ರ,

ಭಾಗದ ಸಂಖ್ಯೆ 217, ಭಾಗದ ಹೆಸರು ಕಾವೇರಿ ಕಲಾಕ್ಷೇತ್ರ,ನಗರಸಭಾ ಕಟ್ಟಡ,ಮಡಿಕೇರಿ, ಮತಗಟ್ಟೆಯ ವಿಳಾಸ ;ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮದಲಾಪುರ’

(ಮದಲಾಪುರ ಕೂಡಿಗೆ ಬಳಿ ಇರುವದಾಗಿದೆ), ಇನ್ನೊಂದು ಮತಚೀಟಿಯಲ್ಲಿ ‘ ಭಾಗದ ಸಂಖ್ಯೆ ; 200, ಭಾಗದ ಹೆಸರು ಎಫ್.ಎಂ.ಕೆ.ಎಂ.ಸಿ ಕಾಲೇಜು,(ಎಡ ಪಾಶ್ರ್ವ), ಮತಗಟ್ಟೆಯ ವಿಳಾಸ ; ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ ಸುಂಟಿಕೊಪ್ಪ (ಸುಂಟಿಕೊಪ್ಪ ಸೋಮವಾರಪೇಟೆ ತಾಲೂಕಿಗೆ ಸೇರುತ್ತದೆ. ಮಡಿಕೇರಿಗೆ ಸಂಬಂಧಪಡುವದಿಲ್ಲ) ಎಂದು ಮುದ್ರಿತವಾಗಿದೆ.

ಇನ್ನು ಕೆಲವರಿಗೆ ನೀಡಿದ ಗುರುತಿನ ಚೀಟಿಗಳಲ್ಲಿ ಮತಗಟ್ಟೆಗಳ ವಿಳಾಸಗಳುಳ್ಳ ಜಾಗದಲ್ಲಿ ಮಹರಾಷ್ಟ್ರ ರಾಜ್ಯ-ಕರ್ನಾಟಕ ಗಡಿ ಭಾಗವಾದ ‘ಕೊಲ್ಲಾಪುರ, ದ.ಕ ಜಿಲ್ಲೆಯ ಉಡುಪಿ ಸಮೀಪದ ಕೊಲ್ಲೂರು, ಕುಶಾಲನಗರ ಸಮೀಪದ ಗುಡ್ಡೆಹೊಸೂರು ಹೀಗೆ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಕರ್ತವ್ಯ ಲೋಪಗಳ ಪರಮಾವಧಿಯಿಂದ ಮತ್ತು ಬೇಜವಾಬ್ದಾರಿ ಮುದ್ರಣಗೊಂಡಿದೆ.

ಇದರಂತೆ ಈಗಾಗಲೇ ವಿತರಣೆಯಾದ ಎಪಿಕ್ ಕಾರ್ಡ್‍ಗಳಲ್ಲಿ ವಿಳಾಸ ಬದಲಾವಣೆ, ‘ಸ್ತ್ರಿ’ ಇರುವಲ್ಲಿ’ ಪುರುಷ’ ತಂದೆ-ತಾಯಿಯವರ ಹೆಸರು ಬದಲಾವಣೆ ಇತ್ಯಾದಿಯಾಗಿ ಲೋಪ ದೋಷಗಳಿಂದ ಹಾಗೂ ಅವ್ಯವಸ್ಥೆ ಯಿಂದ ಕೂಡಿದೆ. ಈ ಬಗ್ಗೆ ಮನೆ-ಮನೆಗಳಿಗೆ ತೆರಳಿ ಎಪಿಕ್ ಕಾರ್ಡ್‍ಗಳನ್ನು ಮತ್ತು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲು ತೆರಳಿದಾಗ ಅಂಗನವಾಡಿ ಶಿಕ್ಷಕಿ ಯರೊಂದಿಗೆ, ಬಿ.ಎಲ್. ಒಗಳೊಂದಿಗೆ ಕಲಹಕ್ಕಿಳಿಯುತ್ತಿದ್ದಾರೆ. ಈ ವಿಚಾರವನ್ನು ತಹಶೀಲ್ದಾರರ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಾಗ ‘ನಿಮ್ಮ ಕೆಲ್ಸ ಮಾಡ್ರಿ, ನಾವು ಹೇಳಿದಂತೆ ಕೇಳ್ರಿ’ ಎಂದು ದಬಾಯಿಸುತ್ತಿದ್ದಾರೆ ಎಂದು ಪತ್ರಿಕೆಯೊಂದಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ.

-ಶ್ರೀವತ್ಸ