ಮಡಿಕೇರಿ, ಏ. 9: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವು ತಾ. 18 ರಂದು ನಡೆಯಲಿದ್ದು, ಜಿಲ್ಲೆಯ 543 ಮತಗಟ್ಟೆಗಳಿಗೆ ನಿಯೋಜಿಸಿರುವ ಪಿಆರ್‍ಒ, ಎಪಿಆರ್‍ಒ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ನಗರದ ಸಂತ ಜೋಸೆಫರ ಶಾಲೆ ಹಾಗೂ ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಎರಡನೇ ಹಂತದ ತರಬೇತಿ ನಡೆಯಿತು.

ಮಸ್ಟರಿಂಗ್ ದಿನ ಮತ್ತು ಮತಗಟ್ಟೆ ಕೇಂದ್ರದಲ್ಲಿ ನಿರ್ವಹಿಸಬೇಕಾದ ಕಾರ್ಯ ಹಾಗೂ ಡಿಮಸ್ಟರಿಂಗ್ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಸಹಾಯಕ ಚುನಾವಣಾಧಿಕಾರಿಗಳಾದ ಟಿ. ಜವರೇಗೌಡ, ಶ್ರೀನಿವಾಸ್ ಮತ್ತು ಮಾಸ್ಟರ್ ತರಬೇತಿದಾರರು ಮಾಹಿತಿ ನೀಡಿದರು.

ಅಣುಕು ಮತದಾನ, ಅಂಚೆ ಮತಪತ್ರ, ಮಸ್ಟರಿಂಗ್, ಡಿಮಸ್ಟರಿಂಗ್ ಕಾರ್ಯ ನಿರ್ವಹಣೆ ಹಾಗೂ ಕಂಟ್ರೊಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಮತ್ತಿತರ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಲಾಯಿತು.

ಮಾಸ್ಟರ್ ತರಬೇತುದಾರರಾದ ವಾಲ್ಟರ್ ಡಿಮೆಲ್ಲೊ, ಷಂಶುದ್ದೀನ್ ಮತ್ತು ದಿವಾಕರ ವಿದ್ಯುನ್ಮಾನ ಮತಯಂತ್ರ, ಅಣಕು ಮತದಾನ, ಕಂಟ್ರೋಲ್ ಹಾಗೂ ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಅಳವಡಿಸುವದು. ಮತಗಟ್ಟೆ ಕೇಂದ್ರದಲ್ಲಿ ಮತದಾನದಂದು ಪೂರ್ವ ಸಿದ್ಧ್ದತೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ತಹಶೀಲ್ದಾರರಾದ ನಟೇಶ್, ಗೋವಿಂದರಾಜು ಇತರರು ಇದ್ದರು.