ಮಡಿಕೇರಿ, ಏ. 8: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರವೂ ಸೇರಿದಂತೆ ರಾಜ್ಯದ 14 ಕಡೆಗಳಲ್ಲಿ; ಮುಂದಿನ ಹತ್ತು ದಿನಗಳಲ್ಲಿ ಸಂಬಂಧಿಸಿದ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಇದೇ ತಾ. 18 ರಂದು ಕೊಡಗು - ಮೈಸೂರು ಸೇರಿದಂತೆ 14 ಸ್ಥಾನಗಳಿಗೆ ಮತದಾನ ನಡೆಯಲಿದೆ. ನಮ್ಮ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 22 ಮಂದಿ ಕಣದಲ್ಲಿದ್ದರೂ, ಕೇವಲ ಬಿಜೆಪಿ ಹಾಗೂ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಈಗಾಗಲೇ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಿ ಸಂಸದ ಪ್ರತಾಪ್ಸಿಂಹ ಹಾಗೂ ಮೈತ್ರಿ ಬಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್. ವಿಜಯ ಶಂಕರ್ ನಡುವೆ ಮುಖಾಮುಖಿ ಪೈಪೋಟಿ ಏರ್ಪಟ್ಟಿದ್ದು, ಇನ್ನುಳಿದ 20 ಅಭ್ಯರ್ಥಿಗಳು ‘ಆಟಕ್ಕುಂಟು - ಲೆಕ್ಕಕ್ಕಿಲ್ಲ’ ಎಂಬಂತೆ ಕಣದಲ್ಲಿದ್ದಾರೆ. ಮಾತ್ರವಲ್ಲದೆ ಈ ಇಬ್ಬರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಹೊರತಾಗಿ ಕೊಡಗಿನ ಮತಕ್ಷೇತ್ರಗಳಲ್ಲಿ ಮಿಕ್ಕವರು ಸುಳಿಯಲೇ ಇಲ್ಲವೆಂದು ಗೊತ್ತಾಗಿದೆ.
ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಪರವಾಗಿ ಕೇಂದ್ರ ಸಚಿವೆ ಸ್ಮøತಿ ಇರಾನಿ ಪ್ರಚಾರ ಸಭೆ ನಡೆಸಿರುವ ಹೊರತು ಬೇರಾವದೇ ನಾಯಕರು ಇದುವರೆಗೆ ಬಹಿರಂಗ ಸಭೆಯಲ್ಲಿ ಕಾಣಿಸಿಕೊಂಡಿಲ್ಲ. ಬದಲಾಗಿ ಪಕ್ಷದ ಇತರ ಮುಖಂಡರು, ಜಿಲ್ಲೆಯ ಶಾಸಕತ್ರಯರೊಂದಿಗೆ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಬಣದಿಂದ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಸಹಿತ ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತ ಬೆಂಬಲಿಗರು ಜತೆಗೂಡಿ ಜಿಲ್ಲೆಯಲ್ಲಿ ಪ್ರಚಾರದೊಂದಿಗೆ ಮತಯಾಚನೆಯಲ್ಲಿ ತೊಡಗಿದ್ದಾರೆ.
ಪ್ರಸಕ್ತ ಚುನಾವಣೆಯಲ್ಲಿ ದೃಶ್ಯ ಮಾಧ್ಯಮಗಳು ಮತದಾರರ ನಾಡಿಮಿಡಿತ ತಿಳಿಯಲು ಅಲ್ಲಲ್ಲಿ ಜನಸಾಮಾನ್ಯರು, ರಾಜಕೀಯ ಕಾರ್ಯಕರ್ತರನ್ನು ಒಗ್ಗೂಡಿಸಿ ಸುದ್ದಿಯೊಂದಿಗೆ ಸದ್ದು ಮಾಡುತ್ತಿರುವದು ಕಂಡು ಬಂದಿದೆ. ಬದಲಾಗಿ ಹಿಂದಿನ ಚುನಾವಣೆಗಳಂತೆ ರಾಜ್ಯದ ಇತರೆಡೆಗಳಿಗಿಂತ ಕೊಡಗು ಭಿನ್ನವಾಗಿ ಗೋಚರಿಸುತ್ತಿದೆ. ಎಲ್ಲಿಯೂ ಅಭ್ಯರ್ಥಿಗಳು ಮತ್ತು ರಾಜಕೀಯ ನಾಯಕರ ಕಟೌಟ್ಗಳಾಗಲೀ, ಬ್ಯಾನರ್, ಬಿತ್ತಿ ಪತ್ರಗಳಾಗಲೀ ಕಾಣಿಸುತ್ತಿಲ್ಲ. ರಾಜಕೀಯ ಧ್ವಜಗಳು ಕೂಡ ಪ್ರದರ್ಶನಗೊಂಡಿಲ್ಲ; ಇತರೆಡೆಗಳಂತೆ ‘ರೋಡ್ ಶೋ’ ಧ್ವನಿವರ್ಧಕಗಳ ಆರ್ಭಟ ಕೇಳಿಸುತ್ತಿಲ್ಲ; ಈ ನಡುವೆ ಜಿಲ್ಲಾಡಳಿತ ಮಾತ್ರ ಮೇಲಿಂದ ಮೇಲೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಚುನಾವಣಾ ತಯಾರಿಯೊಂದಿಗೆ ತರಬೇತುಗೊಳಿಸುತ್ತಿದೆ.
ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 543 ಮತಗಟ್ಟೆಗಳನ್ನು ಸಂಪೂರ್ಣ ಸಜ್ಜುಗೊಳಿಸಲಾಗಿದೆ. ಅಲ್ಲಿ ಮೂಲಭೂತ ಸೌಲಭ್ಯದೊಂದಿಗೆ ತಾ. 18 ರಂದು ಮತದಾನ ಪ್ರಕ್ರಿಯೆಗೆ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆ ಕೂಡ ಎಲ್ಲ ಮತಗಟ್ಟೆಗಳಿಗೆ ಸೂಕ್ತ ರಕ್ಷಣೆಯ ತಯಾರಿಯಲ್ಲಿ ಸಿಬ್ಬಂದಿ ನಿಯೋಜನೆ ಸಹಿತ ಚುನಾವಣಾ ಆಯೋಗದ ನಿರ್ದೇಶನ ಪಾಲನೆಗೆ ಸನ್ನದ್ದಗೊಳ್ಳತೊಡಗಿದೆ. ಒಟ್ಟಿನಲ್ಲಿ ಮುಂದಿನ 10 ದಿನಗಳಲ್ಲಿ ನಮ್ಮ ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಡೆಯಲಿದೆ.