ಕುಶಾಲನಗರ, ಏ. 8: ದುಬಾರೆ ಸಾಕಾನೆ ಶಿಬಿರದಲ್ಲಿ ಗಂಡಾನೆಯೊಂದು ಮದವೇರಿ ಶಿಬಿರದಿಂದ ಪರಾರಿಯಾದ ಪ್ರಕರಣ ಭಾನುವಾರ ನಡೆದಿದೆ. ಅಪಾಯದ ಮುನ್ಸೂಚನೆ ಹಿನ್ನಲೆಯಲ್ಲಿ ಶಿಬಿರದಲ್ಲಿ ಉಳಿದ ಆನೆಗಳನ್ನು ಮುನ್ನೆಚ್ಚರಿಕೆ ಯಾಗಿ ಸ್ಥಳಾಂತರಿಸಲಾಗಿದೆ. ಶಿಬಿರದಲ್ಲಿ ಒಟ್ಟು 27 ಸಾಕಾನೆಗಳಿದ್ದು ಉಳಿದಂತೆ 26 ಆನೆಗಳಿಗೆ ಯಾವದೇ ಅಪಾಯ ಉಂಟಾಗದಂತೆ ಎಚ್ಚರವಹಿಸಲಾಗಿದೆ. ದುಬಾರೆ ಪ್ರವಾಸಿ ಕೇಂದ್ರಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಶಿಬಿರದ ಗೋಪಿ (37) ಕಳೆದ ಮೂರು ತಿಂಗಳಿನಿಂದ ಮದ ಬಂದ ಹಿನೆÀ್ನಲೆಯಲ್ಲಿ ಮಾವುತ ಕಾವಾಡಿಗರು ಅದನ್ನು ಪ್ರತ್ಯೇಕವಾಗಿ ಕಾಲಿಗೆ ಬೇಡಿ ತೊಡಿಸಿ ಆರೈಕೆಯಲ್ಲಿ ತೊಡಗಿದ್ದರು. ಭಾನುವಾರ ಗೋಪಿಗೆ ಮದ ಜಾಸ್ತಿಯಾಗುವದರೊಂದಿಗೆ ತನ್ನ ಕಾಲಿನ ಬೇಡಿ ಸರಪಳಿ ಕಿತ್ತು ಹಾಕಿ ದುಬಾರೆ ಮೀಸಲು ಅರಣ್ಯದತ್ತ ಪರಾರಿಯಾಗಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್ ಮಾಹಿತಿ ನೀಡಿದ್ದಾರೆ.

ಈ ಘಟನೆಯಿಂದ ಆತಂಕಕ್ಕೊಳಗಾದ ದುಬಾರೆಯ ಮಾವುತ ಕಾವಾಡಿಗರು ಮತ್ತು ಅವರ ಕುಟುಂಬ ಸದಸ್ಯರು ಯಾವದೇ ಅಪಾಯ ಉಂಟಾಗದಂತೆ ಎಚ್ಚರ ವಹಿಸಿದ್ದಾರೆ. ಗೋಪಿಯ ಮಾವುತ ಕಾವಾಡಿಗರ ಮೂಲಕ ಮದವೇರಿದ ಆನೆಯ ಚಲನವಲನಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಇನ್ನೂ 10 ದಿನ ಮದ ಇಳಿಯಲು ಕಾಲಾವಕಾಶ ಬೇಕಾಗಬಹುದು ಎಂದು ವನ್ಯಜೀವಿ ತಜ್ಞರಾದ ಡಾ.ಮುಜೀಬ್ ಮಾಹಿತಿ ನೀಡಿದ್ದಾರೆ ಎಂದು ಅರುಣ್ ತಿಳಿಸಿದ್ದಾರೆ.

ಉಳಿದಂತೆ ಶಿಬಿರದಲ್ಲಿದ್ದ ಆನೆಗಳನ್ನು ನದಿ ತಟದ ದ್ವೀಪವೊಂದಕ್ಕೆ ಸ್ಥಳಾಂತರಿಸಲಾಗಿದೆ. ಮದವೇರಿದ ಗೋಪಿ ನದಿ ದಾಟಿ ಜನವಸತಿ ಪ್ರದೇಶಕ್ಕೆ ಬರದಂತೆ ಕಾರ್ಯಯೋಜನೆ ಸಿದ್ದಪಡಿಸ ಲಾಗಿದೆ ಎಂದಿದ್ದಾರೆ. ಗೋಪಿಯ ಮಾವುತ ಅಪ್ಪಯ್ಯ ಮತ್ತು ಕಾವಾಡಿಗ ದೂರದಿಂದ (ಮೊದಲ ಪುಟದಿಂದ) ಚಲನವಲನ ವೀಕ್ಷಿಸುತ್ತಿದ್ದು ಯಾವದೇ ಅಪಾಯ ಸಂಭವಿಸದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿರುವ ಅರುಣ್, ಗೋಪಿ ಕಳೆದ ಹಲವು ವರ್ಷಗಳಿಂದ ಮೈಸೂರಿನ ದಸರಾದಲ್ಲಿ ಪಾಲ್ಗೊಳ್ಳಲು ತೆರಳುತ್ತಿತ್ತು ಎಂದು ತಿಳಿಸಿದ್ದಾರೆ.

ದಸರಾಗೆ ತೆರಳುವ ಸಂದರ್ಭ ಕೂಡ ಆನೆ ಮೈಸೂರಿಗೆ ಸಾಗಿಸಲು ಲಾರಿ ಏರುವ ಸಂದರ್ಭ ಹಲವು ಬಾರಿ ಮೊಂಡುತನ ಮಾಡಿದ್ದ ಬಗ್ಗೆ ಮಾವುತರು ಮಾಹಿತಿ ನೀಡಿದ್ದಾರೆ. ಭಾನುವಾರದಿಂದ ಪ್ರವಾಸಿಗರಿಗೆ ದುಬಾರೆ ಸಾಕಾನೆ ಶಿಬಿರಕ್ಕೆ ನಿರ್ಬಂಧ ಹೇರಲಾಗಿದ್ದು ಯಾರೂ ಶಿಬಿರಕ್ಕೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವದೇ ಸಂದರ್ಭ ಮದವೇರಿದ ಆನೆ ದಾಳಿ ಮಾಡುವ ಸಾಧ್ಯತೆ ಇರುವದರಿಂದ ಶಿಬಿರದ ಸಿಬ್ಬಂದಿಗಳು ದಿನದ 24 ಗಂಟೆ ನಿಗಾವಹಿಸಿದ್ದಾರೆ ಎಂದು ದುಬಾರೆ ಸಾಕಾನೆ ಶಿಬಿರದ ಉಪ ವಲಯ ಅರಣ್ಯಾಧಿಕಾರಿ ರಂಜನ್ ತಿಳಿಸಿದ್ದಾರೆ.