ಮಡಿಕೇರಿ, ಏ. 8: ಕಳೆದ ಕೆಲವು ದಿನಗಳಿಂದ ತಲಕಾವೇರಿ ಅಭಯಾರಣ್ಯದೊಳಗೆ ಕೇರಳದ ಚಲನ ಚಿತ್ರ ತಂಡಕ್ಕೆ ಚಿತ್ರೀಕರಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಿದ ಬಗ್ಗೆ ದೂರುಗಳು ಬಂದ ಹಿನ್ನೆಲೆ ಹಾಗೂ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಚಿತ್ರೀಕರಣ ಸ್ಥಗಿತಗೊಳಿಸಿದರು. ಪ್ರಭಾವಿ ಕೇರಳದ ಚಿತ್ರೀಕರಣ ತಂಡ ಹಾಗೂ ಅವರ ವಾಹನಗಳನ್ನು ಹೊರಕಳುಹಿಸಿದ್ದರು.

ಆದರೆ, ಬಾಡಿಗೆಗೆ ತೆರಳಿದ ಸ್ಥಳೀಯ ಅಮಾಯಕರ ವಾಹನವನ್ನು ವಶಪಡಿಸಿಕೊಂಡು ಕ್ರಮ ಜರುಗಿಸಿದ್ದಾರೆ. ಇದೀಗ ಸಾರ್ವಜನಿಕ ವಲಯದಲ್ಲಿ ಚಿತ್ರೀಕರಣಕ್ಕೆ ಬಳಸಿದ, ಬಳಸಲಾದ ದೊಡ್ಡ ವಾಹನಗಳ ಮೇಲೆ ಕ್ರಮ ಕೈಗೊಳ್ಳದೆ, ಸ್ಥಳೀಯ ಅಮಾಯಕರ ವಾಹನಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.