ಸೋಮವಾರಪೇಟೆ,ಏ.8: ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಷ್ಟ್) ಪಕ್ಷದ ಅಭ್ಯರ್ಥಿ ಪಿ.ಎಸ್.ಸಂಧ್ಯಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಮಾರ್ಗದಲ್ಲಿ ಸಂಚರಿಸಿದ ಪದಾಧಿಕಾರಿಗಳು, ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ವಿರೋಧಿಸುತ್ತಾ ಚುನಾವಣಾ ಪ್ರಚಾರ ನಡೆಸಿದರು.

ದೇಶದಲ್ಲಿ ಈವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ದೇಶದ ಅಭಿವೃದ್ಧಿ ಅಸಾಧ್ಯವಾಗಿದೆ. ಬಿಜೆಪಿ ಕೋಮುವಾದಿ ಆಡಳಿತಕ್ಕೆ ಕಾಂಗ್ರೆಸ್ ಪರ್ಯಾಯ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ 60 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಇಂದಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಅಭ್ಯರ್ಥಿ ಪಿ.ಎಸ್.ಸಂಧ್ಯಾ ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಆಳ್ವಿಕೆಯಲ್ಲಿ ಜನರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಏಜೆಂಟ್‍ರಂತೆ ವರ್ತಿಸಿದೆ. ಉದ್ಯೋಗ ಸೃಷ್ಟಿ ಮರೀಚಿಕೆಯಾಗಿದೆ. ನೋಟು ಅಮಾನ್ಯೀಕರಣ ಹಾಗು ಜಿಎಸ್‍ಟಿಯಿಂದಾಗಿ ಹಲವಷ್ಟು ಉದ್ಯೋಗಗಳು ನಾಶವಾಗಿವೆ ಎಂದು ದೂರಿದರು. ಬಡವರು, ಶೋಷಿತರು, ದುರ್ಬಲರು ಹಾಗು ಮಹಿಳೆಯರ ಪರವಾಗಿ ಹೋರಾಟ ಮಾಡುತ್ತಿರುವ ಎಸ್.ಯು.ಸಿ.ಐ.(ಕಮ್ಯೂನಿಷ್ಟ್) ಪಕ್ಷಕ್ಕೆ ಮತ ನೀಡುವ ಮೂಲಕ ಬಡವರ ಪರ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ.ರವಿ, ಚಂದ್ರಶೇಖರ್ ಮೇಟಿ, ಎಂ.ಉಮಾ ದೇವಿ, ಸುಭಾಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.