ಮಡಿಕೇರಿ, ಏ. 8: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಶಾಶ್ವತವಾದ ನೆರವು ಒದಗಿಸುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ಕಾರ್ಯಯೋಜನೆಗಳು ಜಾರಿಯಾಗಬೇಕೆಂದು ಇನ್ನರ್ ವೀಲ್ ಸಂಸ್ಥೆಯ ರಾಷ್ಟ್ರೀಯ ಜಂಟಿ ಅಧ್ಯಕ್ಷೆ ಸ್ಮಿತಾ ಪಿಂಗ್ಲೆ ಕರೆ ನೀಡಿದ್ದಾರೆ.
ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ರೋಟರಿ ಸಭಾಂಗಣದಲ್ಲಿ ಆಯೋಜಿತ ಪ್ರಕೃತಿ ವಿಕೋಪ ಸಂತ್ರಸ್ತರಿಗಾಗಿ ಹಸುಗಳನ್ನು ವಿತರಿಸುವ ಮತ್ತು ವಿದ್ಯುತ್ ದೀಪಗಳ ಸಂಪರ್ಕ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ನರ್ ವೀಲ್ ಸಂಸ್ಥೆಯ ರಾಷ್ಟ್ರೀಯ ಜಂಟಿ ಅಧ್ಯಕ್ಷೆ ಸ್ಮಿತಾ ಪಿಂಗ್ಲೆ, ಗೆಳೆತನದೊಂದಿಗೆ ಸೇವಾಮನೋಭಾವದ ಮೂಲಕ ಸಹಾಯಹಸ್ತ ಚಾಚುವದು ಇನ್ನರ್ ವೀಲ್ ಉದ್ದೇಶವಾಗಿದೆ. ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೆರವು ಮೊದಲಾಗಬೇಕು. ಈ ನಿಟ್ಟಿನಲ್ಲಿ ದೇಶದಾದ್ಯಂತಲಿನ ಇನ್ನರ್ ವೀಲ್ ಕ್ಲಬ್ ಗಳು ಕೊಡಗು ಹಾಗೂ ಕೇರಳದ ಜಲಪ್ರಳಯದ ಸಂತ್ರಸ್ತರ ನೆರವಿಗೆ ಧಾವಿಸಿದೆ ಎಂದರು. ಹಸುಗಳನ್ನು ನೀಡುವದರ ಮೂಲಕ ಸಂತ್ರಸ್ತರಾದವರ ನವಜೀವನಕ್ಕೆ ಸಹಾಯವಾಗಲಿದೆ ಎಂದೂ ಸ್ಮಿತಾಪಿಂಗ್ಲೆ ಅಭಿಪ್ರಾಯ ಪಟ್ಟರು.
ಇನ್ನರ್ ವೀಲ್ ಜಿಲ್ಲೆ 319 ರ ಅಧ್ಯಕ್ಷೆ ಶ್ರೀವಿದ್ಯಾ ಮೋಹನ್ ಮಾತನಾಡಿ, ಸಂತ್ರಸ್ತರಲ್ಲಿ ನೋವು ಮರೆಸಿ ಕಳೆದುಹೋದ ಜೀವನದ ಸವಿ ಕ್ಷಣಗಳನ್ನು ಮತ್ತೆ ಕಟ್ಟಿಕೊಡುವ ನಿಟ್ಟಿನಲ್ಲಿ ಪ್ರತಿಯೋರ್ವರೂ ಮುಂದಾಗಬೇಕು. ಮಾನವೀಯತೆ ಬೆರೆತ ಸೇವೆ ಸಂತ್ರಸ್ತರ ಪಾಲಿಗೆ ಲಭಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಇನ್ನರ್ ವೀಲ್ ಜಿಲ್ಲೆ 318 ರ ಅಧ್ಯಕ್ಷೆ ಡಾ.ಸಾರಿಕಾ ಪ್ರಸಾದ್, ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ಲತಾ ಚಂಗಪ್ಪ, ಕಾರ್ಯದರ್ಶಿ ಕಣ್ಣು ದೇವರಾಜ್, ಯೋಜನಾ ನಿರ್ದೇಶಕಿ ನಯನಾ ಅಚ್ಚಪ್ಪ ಇದ್ದರು.
ಇದೇ ಸಂದರ್ಭ ಜಲಪ್ರಳಯದ 10 ಸಂತ್ರಸ್ತರಿಗೆ ಹೈಬ್ರೀಡ್ ತಳಿಯ ಹಸುಗಳನ್ನು ವಿತರಿಸಲಾಯಿತು. ಅಂತೆಯೇ ಹಮ್ಮಿಯಾಲ ಗ್ರಾಮದಲ್ಲಿನ 11 ಸಂತ್ರಸ್ತರ ಮನೆಗಳಿಗೆ ಮಿನಿ ಹೈಡ್ರೋ ಪವರ್ ಜನರೇಟರ್ ಮೂಲಕ ವಿದ್ಯುತ್ ದೀಪಗಳ ಸಂಪರ್ಕ ಕಲ್ಪಿಸಲಾಯಿತು.