ಮಡಿಕೇರಿ, ಏ.5 : ಕರ್ನಾಟಕ ವಿಜ್ಞಾನ ಪರಿಷತ್ತು ವತಿಯಿಂದ ಕಾಲೇಜು ಶಿಕ್ಷಣ ಇಲಾಖೆ, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಪದವಿ ವಿಜ್ಞಾನ ವಿದ್ಯಾರ್ಥಿಗಳಿಗೆ ‘ಮನುಕುಲಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ’ ಎಂಬ ವಿಷಯದಡಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಐದು ಉಪ ವಿಷಯಗಳಡಿ ಪ್ರಥಮ ಸ್ಥಾನ ಪಡೆದ ಐದು ತಂಡಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿವೆ.
ಪುತ್ತೂರಿನ ವಿವೇಕಾನಂದ ಕಾಲೇಜಿನ ಶ್ರೀಲತ ಮತ್ತು ಅದಿಥಿ ತಂಡ ಎಫ್.ಎಂ.ಸಿ.ಕಾಲೇಜಿನ ಅರುಣ್ ಮತ್ತು ದರ್ಶನ್ ಇದೇ ಕಾಲೇಜಿನ ಆರ್.ಶಿಲ್ಪ ಮತ್ತು ಕೆ.ಆರ್. ಅಜಿತ್ ಇದೇ ಕಾಲೇಜಿನ ಎಸ್.ಎನ್.ಸವಿತ ಮತ್ತು ಸಂಜೀವಿನಿ ಇದೇ ಕಾಲೇಜಿನ ಸುಮಯ ಮತ್ತು ಅಶ್ವಿನಿ ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಐದು ತಂಡಗಳಿಗೆ ತಲಾ ರೂ.3 ಸಾವಿರ ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ತಲಾ ರೂ.2 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ|| ಟಿ.ಡಿ.ತಿಮ್ಮಯ್ಯ ಮಾತನಾಡಿ, ವಿಜ್ಞಾನವು ನಮ್ಮ ಬದುಕಿನ ಅವಿಭಾಜ್ಯ ಅಂಗ ವಾಗಿದ್ದು, ಮನುಕುಲದ ಅಭ್ಯುದಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ ವಾಗಿದೆ ಎಂದರು. ಬಹುಮಾನ ವಿತರಿಸಿದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವನೆ ಯೊಂದಿಗೆ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು. ಪ್ರಶಸ್ತಿ ಪತ್ರ ವಿತರಿಸಿದ ಕೊಡಗು ಪತ್ರಿಕಾ ಭವನ ಟ್ರಸ್ಟಿ ಎಂ.ಪಿ.ಕೇಶವಕಾಮತ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನಿಗಳ ಸಂಶೋಧನೆ ಬಗ್ಗೆ ಅಧ್ಯಯನದ ಕೈಗೊಂಡು ಹೊಸ ಅನ್ವೇಷಣೆಗಳ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ರೂಪುಗೊಳ್ಳಬೇಕು ಎಂದರು.
ತೀರ್ಪುಗಾರರ ಪರವಾಗಿ ಪ್ರೊ. ಎಂ.ಎನ್.ರವಿಶಂಕರ್, ವಿಜ್ಞಾನವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ತುಂಬಾ ಸಹಕಾರಿಯಾಗಿವೆ ಎಂದರು.ಕಾರ್ಯಕ್ರಮದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಲು ಇಂತಹ ಸ್ಪರ್ಧೆಗಳನ್ನು ಸಂಘಟಿಸಲಾಗುತ್ತಿದೆ ಎಂದರು.ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|| ಜೆ.ಜಿ.ಮಂಜುನಾಥ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್, ಎಂ.ಎನ್. ವೆಂಕಟನಾಯಕ್, ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ, ಪರಿಷತ್ತಿನ ಕೇಂದ್ರ ಕಚೇರಿಯ ಸಿಬ್ಬಂದಿ ನಾಗೇಶ್ ಹಿರೇಮಠ್ ಇದ್ದರು.