ಮಡಿಕೇರಿ, ಏ. 5: ಭಾರತೀಯ ಯುವ ಕಾಂಗ್ರೆಸ್ ಮತ್ತು ಯುವ ಜನತಾದಳದ ಜಿಲ್ಲಾ ಘಟಕಗಳ ವತಿಯಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಮೋದಿ ಯುವಜನ ವಿರೋಧಿ ವಾಹನ ಪ್ರಚಾರ ಜಾಥಾಕ್ಕೆ ನಗರದಲ್ಲಿ ಶುಕ್ರವಾರ ಚಾಲನೆ ದೊರಕಿತು.

ಜಾಥಾಕ್ಕೆ ಚಾಲನೆ ನೀಡಿದ ಹೈಕೋರ್ಟ್ ವಕೀಲ ಅನಂತ್ ನಾಯಕ್ ಮಾತನಾಡಿ, ನರೇಂದ್ರ ಮೋದಿಯವರ ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿಯ ಸದೃಢ ದೇಶವನ್ನು ಕಟ್ಟುವ ಬದಲಾಗಿ ನಿರುದ್ಯೋಗದ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಮೋದಿಯ ಟೈಂ ಬಾಂಬ್ ಯಾವಾಗ ಸಿಡಿಯುತ್ತೋ ಗೊತ್ತಿಲ್ಲ. ನಿರುದ್ಯೋಗ ಸಮಸ್ಯೆಯಿಂದ ಯುವಕರು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವಂತಹ ಹೀನಾಯ ಸ್ಥಿತಿಗೆ ದೇಶ ತಲಪಿದೆ. ಇದಕ್ಕೆಲ್ಲ ನೇರ ಹೊಣೆ ಮೋದಿ ಎಂದು ಕುಟುಕಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಮಾತನಾಡಿ, 5 ವರ್ಷಗಳಿಂದ ಪ್ರತಾಪ್ ಸಿಂಹ ಜಿಲ್ಲೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ತರದೆ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು.

ಯುವ ಜನತಾದಳ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಲ್. ವಿಶ್ವ ಮಾತನಾಡಿ, ಪಕ್ಷದಲ್ಲಿ ಯುವ ಕಾರ್ಯಕರ್ತರು ಹೆಚ್ಚುತ್ತಿರುವದರಿಂದ ಪಕ್ಷ ಸಂಘಟನೆ ಬಲಗೊಂಡಿದೆ ಎಂದು ತಿಳಿಸಿದರು. ಪ್ರಚಾರ ಜಾಥಾದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನೀಫ್ ಸಂಪಾಜೆ, ಕಾಂಗ್ರೆಸ್ ಮುಖಂಡರಾದ ಕೆ.ಪಿ. ಚಂದ್ರಕಲಾ, ಸುರಯ್ಯ ಅಬ್ರಾರ್, ಅಬ್ದುಲ್ ರಜಾಕ್, ಉಸ್ಮಾನ್, ನಗರ ಜೆಡಿಎಸ್ ಅಧ್ಯಕ್ಷ ರವಿಕಿರಣ್ ಹಾಜರಿದ್ದರು.

ವಿಳಂಬವಾದ ಜಾಥಾ: ಬೆಳಿಗ್ಗೆ 10ಕ್ಕೆ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಆರಂಭವಾಗಬೇಕಿದ್ದ ಮೋದಿ ಯುವಜನ ವಿರೋಧಿ ಜಾಥಾ ನಗರ ಪೆÇಲೀಸ್ ಠಾಣೆಯ ಅನುಮತಿ ಇಲ್ಲದ ಕಾರಣ, ಮಧ್ಯಾಹ್ನ 12.30ಕ್ಕೆ ಆರಂಭವಾಯಿತು. ಪೊಲೀಸರ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಲು ಮುಂದಾಗಿದ್ದ ಸಂದರ್ಭ ಪೊಲೀಸರು ಅಡ್ಡಿಪಡಿಸಿದರು.ಜಾಥಾ ಅಂಗವಾಗಿ ಬೆಳಿಗ್ಗೆ ಜಮಾಯಿಸಿದ ಮೈತ್ರಿ ಪಕ್ಷದ ಕಾರ್ಯಕರ್ತರು ಜಾಥಾ ಪ್ರಚಾರ ವಾಹನ ನಗರಕ್ಕೆ ಪ್ರವೇಶಿಸದ ಕಾರಣ ಸುಡು ಬಿಸಿಲಲ್ಲಿ ನಿಲ್ಲ ಬೇಕಾಯಿತು. ವಾಹನಕ್ಕೆ ಅನುಮತಿ ಸಿಕ್ಕಿದ ಬಳಿಕವಷ್ಟೇ ಮತ್ತೆ ಜಂಟಿ ಪಕ್ಷಗಳ ಪ್ರಚಾರ ಕಾರ್ಯ ಆರಂಭವಾಯಿತು.