ವೀರಾಜಪೇಟೆ, ಏ. 5: ಮಂಡ್ಯ ಕ್ಷೇತ್ರದ ಲೋಕಸಭಾ ಸದಸ್ಯ ಶಿವರಾಮೇಗೌಡ ಹಾಗೂ ಜೆಡಿಎಸ್ ಮುಖಂಡ ಶ್ರೀಕಂಠೆಗೌಡ ಅವರುಗಳು ಮಂಡ್ಯ ಲೋಕಸಭಾ ಸ್ಥಾನದ ಅಭ್ಯರ್ಥಿ ಸುಮಲತಾ ಅವರ ಬಲಿಜ ಜಾತಿಯನ್ನು ಅವಹೇಳನ ಮಾಡಿರುವದನ್ನು ತಾಲೂಕು ಬಲಿಜ ಸಮಾಜ ತೀವ್ರವಾಗಿ ಖಂಡಿಸುತ್ತೇವೆ ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ಟಿ.ಆರ್. ಗಣೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ 25 ಸಾವಿರಕ್ಕೂ ಅಧಿಕ ಬಲಿಜ ಜಾತಿಗೆ ಸೇರಿದ ಜನರಿದ್ದಾರೆ. ರಾಜ್ಯದಲ್ಲಿ 40 ಲಕ್ಷ ಜನರಿದ್ದಾರೆ, ಚಿತ್ರನಟ ದರ್ಶನ್ ಹಾಗೂ ರಾಕ್‍ಲೈನ್ ವೆಂಕಟೇಶ್ ಕೂಡ ಬಲಿಜ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಜೆಡಿಎಸ್ ಪಕ್ಷದ ವಿರುದ್ಧ ಸುಮಲತಾ ಸ್ಪರ್ಧೆ ಮಾಡಿದ್ದಾರೆ ಎಂಬ ಕಾರಣಕ್ಕೆ ಸುಮಾಲತಾ ಅವರ ಜಾತಿಯನ್ನು ದೂಷಿಸುವದು ಸರಿಯಲ್ಲ. ಶಿವರಾಮೇಗೌಡ ಹಾಗೂ ಶ್ರೀಕಂಠೆಗೌಡ ಅವರುಗಳು ತಕ್ಷಣ ನಮ್ಮ ಸಮಾಜದ ಕ್ಷಮೆ ಕೇಳದಿದ್ದರೆ ಚುನಾವಣೆ ಕಳೆದ ಬಳಿಕ ಅವರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವದು ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಟಿ.ಆರ್. ಭರತ್, ನಿರ್ದೇಶಕ ಟಿ.ಎಂ. ಯೋಗೇಶ್ ನಾಯ್ಡು ಉಪಸ್ಥಿತರಿದ್ದರು.