ಗೋಣಿಕೊಪ್ಪ ವರದಿ, ಏ. 5: ಸೇವೆಯಲ್ಲಿ ತೊಡಗಿಕೊಂಡಾಗ ತಪ್ಪು ಮಾಹಿತಿ ನಮ್ಮಿಂದ ಸಾರ್ವಜನಿಕರಿಗೆ ಹೋಗದಂತೆ ಕಾಳಜಿ ವಹಿಸಬೇಕು ಎಂದು ಕೊಡಗು ರೆಡ್ ಕ್ರಾಸ್ ಸದಸ್ಯೆ ಡಾ. ವಿನಯ ಮುರಳೀಧರ್ ಸಲಹೆ ನೀಡಿದರು.
ಇಲ್ಲಿನ ಕಾವೇರಿ ಕಾಲೇಜು ಯುವ ರೆಡ್‍ಕ್ರಾಸ್, ಕೊಡಗು ರೆಡ್ ಕ್ರಾಸ್ ಹಾಗೂ ಗೋಣಿಕೊಪ್ಪ ರೋಟರಿ ಕ್ಲಬ್ ಸಹಯೋಗದಲ್ಲಿ ಕಾಲೇಜು ಸೆಮಿನಾರ್ ಆವರಣದಲ್ಲಿ ಆಯೋಜಿಸಿದ್ದ ಯುವ ಜನತೆಗೆ ರೆಡ್‍ಕ್ರಾಸ್ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ಸೇವೆಯಲ್ಲಿ ತೊಡಗಿಕೊಂಡಾಗ ತಪ್ಪು ಮಾಹಿತಿ ನಮ್ಮಿಂದ ಸಾರ್ವಜನಿಕರಿಗೆ ಹೋಗದಂತೆ ಕಾಳಜಿ ವಹಿಸಬೇಕು. ತಪ್ಪು ಮಾಹಿತಿಯ ಸೇವೆ ಜನರಿಗೆ ಅವಶ್ಯಕತೆ ಇರುವದಿಲ್ಲ. ಇದರಿಂದ ತೊಂದರೆಗಳೇ ಹೆಚ್ಚು ಎಂದರು.
ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಸೇರಿಸುವ ಸಂದರ್ಭ ರಕ್ಷಿಸುವವರಿಂದಲೇ ಮತ್ತಷ್ಟು ಅನಾಹುತಗಳಾಗುವ ಸಾಧ್ಯತೆ ಹೆಚ್ಚಿದೆ. ಘಟನೆ ನಡೆದ ಒಂದು ಗಂಟೆಯೊಳಗೆ ಗಾಯಾಳುವಿಗೆ ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಇದು ಗಾಯಾಳುವಿನ ಪಾಲಿಗೆ ಅಮೂಲ್ಯ ಸಮಯವಾಗಿ ರುವದರಿಂದ ನಾವು ರಕ್ಷಣೆ ಮಾಡುವ ಸಂದರ್ಭ ಬೆನ್ನುಮೂಳೆಗೆ ಪೆಟ್ಟಾಗದಂತೆ ಜಾಗರುಕತೆ ವಹಿಸಬೇಕಿದೆ. ಮಾನವೀಯ ಸೇವೆ ನೀಡುವ ಉತ್ಸಾಹದಲ್ಲಿ ಜಾಗರುಕತೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಪಾರುವಂಗಡ ದಿಲನ್ ಚೆಂಗಪ್ಪ ಮಾತನಾಡಿ, ರಕ್ತದಾನದಿಂದ ದೈಹಿಕ ಹಾಗೂ ನೆನಪಿನ ಶಕ್ತಿ ಹೆಚ್ಚಾಗುವ ದರಿಂದ ಯುವಜನತೆ ಹೆಚ್ಚಾಗಿ ರಕ್ತದಾನಕ್ಕೆ ಮುಂದಾಗುತ್ತಿದ್ದಾರೆ. ರಕ್ತದಾನದಿಂದ ಹೃದಯ ಸಂಬಂಧಿ ರೋಗವನ್ನು ತಡೆಗಟ್ಟಲು ಸಾಧ್ಯವಿದೆ ಎಂಬ ಮಾಹಿತಿಯನ್ನು ತಜ್ಞರು ನೀಡಿದ್ದಾರೆ. ಭಯ ಹಾಗೂ ಹಿಂಜರಿಕೆ ಬಿಟ್ಟು ರಕ್ತದಾನದಲ್ಲಿ ಪಾಲ್ಗೊಳ್ಳಬೇಕಿದೆ ಎಂದರು.
ರೆಡ್‍ಕ್ರಾಸ್ ಕಾರ್ಯದರ್ಶಿ ಹೆಚ್.ಆರ್. ಮುರಳೀಧರ್ ಮಾತನಾಡಿ, ರೆಡ್‍ಕ್ರಾಸ್ ಮೂಲಕ ಮಾನವೀಯ ದೃಷ್ಟಿಯಲ್ಲಿ ಸೇವೆ ನೀಡಲು ಅವಕಾಶವಿದೆ. ಯುವ ಜನತೆ ಹೆಚ್ಚಾಗಿ ಸೇವಾ ಕಾರ್ಯಕ್ಕೆ ಮುಂದಾಗಬೇಕಿದೆ.
ಯುವ ರೆಡ್‍ಕ್ರಾಸ್ ಮೂಲಕ ಸೇವೆಯಲ್ಲಿ ತೊಡಗಿಕೊಳ್ಳಿ ಎಂದರು. ಪ್ರಾಂಶುಪಾಲ ಪ್ರೊ. ಎಸ್.ಆರ್. ಉಷಾಲತಾ ಮಾತನಾಡಿ, ಅಂತರಂಗ ಸ್ವಚ್ಛತೆ ಮೂಲಕ ಸೇವೆಯಲ್ಲಿ ತೊಡಗಿಕೊಳ್ಳಬೇಕಿದೆ. ಸಾಮಾಜಿಕವಾಗಿ ಸೇವೆಯಲ್ಲಿ ತೊಡಗಿಕೊಳ್ಳುವಾಗ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದರು.
ಈ ಸಂದರ್ಭ ಯುವ ರೆಡ್‍ಕ್ರಾಸ್ ಸಂಚಾಲಕಿ ಸಿ.ಟಿ. ಕಾವ್ಯ ಸದಸ್ಯರುಗಳಾದ ಎಂ. ಎ. ಕುಶಾಲಪ್ಪ, ಎ.ಆರ್. ಪ್ರವೀಣ್‍ಕುಮಾರ್ ಹಾಗೂ ಲೇಪಾಕ್ಷಿ ಇದ್ದರು.
- ಸುದ್ದಿಪುತ್ರ