ಕುಶಾಲನಗರ, ಏ. 4: ಕುಶಾಲನಗರದ ಬಸವೇಶ್ವರ ಟ್ರಸ್ಟ್ ಸಮಿತಿ ಸಭೆ ಹಂಗಾಮಿ ಅಧ್ಯಕ್ಷ ಆವರ್ತಿ ಮಹಾದೇವಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

1995 ರಲ್ಲಿ ನಲವತ್ತು ಟ್ರಸ್ಟಿಗಳನ್ನು ಒಳಗೊಂಡು ನೋಂದಣಿಯಾಗಿದ್ದ ಸಮಿತಿಯ ಈ ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಪ್ರಮುಖರು ನಿಧನರಾದ ಹಿನ್ನೆಲೆ ಹಂಗಾಮಿ ಅಧ್ಯಕ್ಷರಾಗಿ ಆವರ್ತಿ ಮಹಾದೇವಪ್ಪ, ಉಪಾಧ್ಯಕ್ಷರಾಗಿ ಕುಶಾಲನಗರದ ಮಹಾದೇವಪ್ಪ, ಬಳ್ಳೂರಿನ ರಾಜಶೇಖರ್, ಕಾರ್ಯದರ್ಶಿಯಾಗಿ ಹೆಚ್.ವಿ. ಶಿವಪ್ಪ, ಕೋಶಾಧಿಕಾರಿಯಾಗಿ ಹೆಚ್.ಎಸ್. ಪುಟ್ಟರಾಜು ಅವರನ್ನು ಆಯ್ಕೆ ಮಾಡಲಾಯಿತು.

ಕುಶಾಲನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸವೇಶ್ವರ ಕಲ್ಯಾಣ ಮಂಟಪ ನಿರ್ಮಾಣ ಕುರಿತಾದ ಚರ್ಚೆಗಳು ನಡೆಯಿತು. ಮಂಟಪದ ಜಾಗದ ಸುತ್ತಲೂ ತಂತಿ ಬೇಲಿ ಅಳವಡಿಸಿ ಟ್ರಸ್ಟ್ ನಾಮಫಲಕ ಹಾಕಿ ಮುಂದಿನ ಕಾರ್ಯಯೋಜನೆ ರೂಪಿಸುವ ಸಂಬಂಧ ತಾ. 9 ರಂದು ಮುಂದಿನ ಸಭೆ ಕರೆಯಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಪ್ರಮುಖರಾದ ಎಸ್.ಎನ್. ಶಶಿಧರ್, ಗರಗಂದೂರಿನ ಕೆ.ಎಸ್. ಮಂಜುನಾಥ್, ಆವರ್ತಿಯ ಬೊಮ್ಮರಾಯಪ್ಪ, ವಿಶ್ವೇಶ್ವರಯ್ಯ, ಚಂದ್ರಶೇಖರ್, ಕುಶಾಲನಗರದ ಎಂ.ಬಿ. ಬಸವರಾಜು, ಹೆಚ್.ಪಿ. ಸಂಗಮೇಶ್, ಎಂ.ಕೆ. ರಾಜು, ಸಿ.ಎಸ್. ರೇಣುಕಾ, ಬಸವರಾಜು ಇದ್ದರು.