ಬೆಂಗÀಳೂರು, ಏ. 4: ದಿಢೀರ್ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗುರುವಾರ ಆಕಸ್ಮಿಕವಾಗಿ ಮುಖಾಮುಖಿಯಾದರು. ಈ ವೇಳೆ ಪರಸ್ವರ ಶುಭಾಶಯ ಕೋರುವ ಮೂಲಕ ನೆರೆದಿದ್ದವರಿಗೆ ಅಚ್ಚರಿಯನ್ನುಂಟು ಮಾಡಿದರು. ಇಂದು ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಮಾಧ್ಯಮ ಸಂವಾದಗೋಷ್ಠಿಗೆ ಆಗಮಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಗೋಷ್ಠಿ ಮುಗಿಸಿ ಹೊರಬರುವ ವೇಳೆ ಸುಮಲತಾ ಅಂಬರೀಶ್ ಮಾಧ್ಯಮ ಸಂವಾದಕ್ಕೆ ಆಗಮಿಸಿದರು. ಈ ವೇಳೆ ವಿಶ್ವನಾಥ್ ಅವರಿಗೆ ಸುಮಲತಾ ಹೂಗುಚ್ಚ ನೀಡಿ ಶುಭಕೋರಿದರು. ಈ ವೇಳೆ ಹೆಚ್. ವಿಶ್ವನಾಥ್ ಗಟ್ಟಿಗಿತ್ತೀ ಇದ್ದೀಯಮ್ಮಾ. ಸರ್ಕಾರವನ್ನೇ ಎದುರು ಹಾಕಿಕೊಂಡು ಚುನಾವಣೆಗೆ ಇಳಿದಿದ್ದೀಯ ಒಳ್ಳೆಯದಾಗಲಿ ಎಂದು ಹರಸಿದರು. ಸುಮಲತಾ ಅಂಬರೀಶ್ ಅವರ ಚುನಾವಣೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ, ಸೌಜನ್ಯ ಹಾಗೂ ಜನರನ್ನು ಆಕರ್ಷಿಸುತ್ತಿರುವ ವಿಧಾನಕ್ಕೆ ಹಿರಿಯ ನಾಯಕ ವಿಶ್ವನಾಥ್ ಅಚ್ಚರಿ ವ್ಯಕ್ತಪಡಿಸಿದರು.

ಬಿಜೆಪಿಯನ್ನು ಒಪ್ಪದವರು ಶತ್ರುಗಳಲ್ಲ

ನವದೆಹಲಿ, ಏ. 4: ಬಿಜೆಪಿ ತನ್ನನ್ನು ರಾಜಕೀಯವಾಗಿ ಒಪ್ಪದವರನ್ನು ರಾಷ್ಟ್ರದ ವಿರೋಧಿಗಳೆಂದು, ಶತ್ರುಗಳೆಂದು ಎಂದಿಗೂ ಪರಿಗಣಿಸಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹೇಳಿದ್ದಾರೆ. ತಾ. 6 ರಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಇರುವ ಹಿನ್ನೆಲೆ ಬ್ಲಾಗ್ ಬರೆದಿರುವ ಎಲ್.ಕೆ. ಅಡ್ವಾಣಿ, ವೈವಿಧ್ಯತೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಗೌರವಿಸುವದು ಭಾರತೀಯ ಪ್ರಜಾಪ್ರಭುತ್ವದ ಸಾರ, ಬಿಜೆಪಿ ಸ್ಥಾಪನೆಯಾದ ದಿನದಿಂದಲೂ, ತನ್ನ ರಾಜಕೀಯ ವಿರೋಧಿಗಳನ್ನು ಶತ್ರುಗಳೆಂದು ಭಾವಿಸಿಲ್ಲ, ಬದಲಾಗಿ ಎದುರಾಳಿಗಳೆಂದಷ್ಟೇ ಪರಿಗಣಿಸಿದೆ ಎಂದು ಹೇಳಿದ್ದಾರೆ. 5 ವರ್ಷಗಳ ನಂತರ ಬ್ಲಾಗ್ ಬರೆದಿರುವ ಅಡ್ವಾಣಿ, ಭಾರತೀಯ ರಾಷ್ಟ್ರೀಯತೆಯ ಕಲ್ಪನೆಯಲ್ಲಿಯೂ ಸಹ ರಾಜಕೀಯ ವಿರೋಧಿಗಳನ್ನು ದೇಶ ವಿರೋಧಿಗಳೆಂದು ಎಂದಿಗೂ ಪರಿಗಣಿಸಲಾಗಿಲ್ಲ. ರಾಜಕೀಯವಾಗಿ ಹಾಗೂ ವೈಯಕ್ತಿವಾಗಿ ಪ್ರತಿ ಪ್ರಜೆಯ ಆಯ್ಕೆಯ ಸ್ವಾತಂತ್ರ್ಯಕ್ಕೆ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದಾರೆ. ರಾಷ್ಟ್ರದ ಭದ್ರತೆಯನ್ನು ಚುನಾವಣೆಯ ವಿಷಯವಾಗಿರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿಪಕ್ಷಗಳನ್ನು ದೇಶ ವಿರೋಧಿಗಳೆಂದು ಆರೋಪಿಸುತ್ತಿರುವ ಸಂದರ್ಭದಲ್ಲೇ ಅಡ್ವಾಣಿ ಅವರ ಈ ಹೇಳಿಕೆ ನೀಡಿರುವದು ಮಹತ್ವ ಪಡೆದುಕೊಂಡಿದೆ.

ಐಟಿ ಅಧಿಕಾರಿ ಮನೆಗೆ ಸಿಬಿಐ ದಾಳಿ

ಬೆಂಗಳೂರು, ಏ. 4: ರಾಜಕಾರಣಿಗಳು, ನಟರು ಹಾಗೂ ಗುತ್ತಿಗೆದಾರರಿಗೆ ಶಾಕ್ ನೀಡುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿ ಇಂದು ಸಿಬಿಐ ಅಧಿಕಾರಿಗಳು ಶಾಕ್ ನೀಡಿದ್ದು ದಾಳಿ ವೇಳೆ ಬರೋಬ್ಬರಿ 1.35 ಕೋಟಿ ರೂಪಾಯಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಬಿಐ ಬಲೆಗೆ ಬಿದ್ದಿದ್ದ ಐಟಿ ಅಧಿಕಾರಿ ನಾಗೇಶ್ ಅವರ ಮನೆ ಮೇಲೆ ಇಂದು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ 1.35 ಕೋಟಿ ನಗದು, ಮಹತ್ವದ ದಾಖಲೆಗಳು ಹಾಗೂ ಪೆನ್‍ಡ್ರೈವ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಳೆದ ಮಾರ್ಚ್‍ನಲ್ಲಿ ಗುತ್ತಿಗೆದಾರ ಶ್ರೀನಿವಾಸ್ ಅವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಐಟಿ ಅಧಿಕಾರಿ ನಾಗೇಶ್ ಅವರು ಕೇಸ್ ಖುಲಾಸೆಗೊಳಿಸಲು 40 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಇಂದು 14 ಲಕ್ಷ ರೂಪಾಯಿ ನಗದು ಸ್ವೀಕರಿಸುತ್ತಿದ್ದ ವೇಳೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮೋದಿ ಚಿತ್ರ ಇಂದು ಬಿಡುಗಡೆ ಇಲ್ಲ

ನವದೆಹಲಿ, ಏ. 4: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ಬಿಡುಗಡೆ ದಿನಾಂಕ ಈಗ ಮುಂದೂಡಲ್ಪಟ್ಟಿದೆ. ನಿಗದಿಯಂತೆ ತಾ. 5 ರಂದು ಚಿತ್ರ ತೆರೆ ಕಾಣಬೇಕಾಗಿತ್ತು. ಚಿತ್ರದ ನಿರ್ಮಾಪಕ ಸಂದೀಪ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಚಿತ್ರ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ ಎಂದು ಹೇಳಿದ್ದಾರೆ. ಸೆನ್ಸಾರ್ ಪ್ರಮಾಣಪತ್ರ ಇನ್ನಷ್ಟೇ ಪಡೆಯಬೇಕಿರುವ ಕಾರಣದಿಂದ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆಯ ಬಗ್ಗೆ ಸಂಜೆಯಿಂದಲೇ ಊಹಾಪೆÇೀಹ ಉಂಟಾಗಿತ್ತು. ಚಿತ್ರ ಬಿಡುಗಡೆ ಚುನಾವಣಾ ನೀತಿ ಸಂಹಿತೆಗೆ ಉಲ್ಲಂಘನೆಯಾಗಲಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿತ್ತು.

ರಾಜ್ಯಪಾಲ ಕಲ್ಯಾಣ್ ಸಿಂಗ್‍ಗೆ ಸಂಕಷ್ಟ

ರಾಜಸ್ಥಾನ, ಏ. 4: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರಧಾನಿಯನ್ನು ಹೊಗಳುವ ಮೂಲಕ ಕಲ್ಯಾಣ್ ಸಿಂಗ್ ಸಾಂವಿಧಾನಿಕ ಹುದ್ದೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ಚುನಾವಣಾ ಆಯೋಗ ಹೇಳಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಸರ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕಡತ ರವಾನೆ ಮಾಡಿದ್ದಾರೆ. ಪ್ರಧಾನಿಯೊಬ್ಬರ ಪರವಾಗಿ ಹಾಲಿ ರಾಜ್ಯಪಾಲರೊಬ್ಬರು ಚುನಾವಣೆ ಸಂದರ್ಭದಲ್ಲಿ ಹೇಳಿಕೆ ನೀಡಿ ನಿಯಮಗಳನ್ನು ಉಲ್ಲಂಘನೆ ಮಾಡಿರುವದು ಇದೇ ಮೊದಲ ಪ್ರಕರಣವಾಗಿದೆ. ರಾಜ್ಯಪಾಲರುಗಳಂತಹ ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಸಂಹಿತೆ ಅನ್ವಯವಾಗುವದಿಲ್ಲ. ಆದರೆ ರಾಜಕೀಯದಿಂದ ರಾಜ್ಯಪಾಲರುಗಳು ಅಂತರ ಕಾಯ್ದುಕೊಳ್ಳಬೇಕೆಂದು ರಾಷ್ಟ್ರಪತಿ ಕೋವಿಂದ್ ಹೇಳಿದ್ದರು. ಕಲ್ಯಾಣ್ ಸಿಂಗ್ ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಕಾಂಗ್ರೆಸ್ ಪಕ್ಷ ರಾಷ್ಟ್ರಪತಿಗಳ ಭೇಟಿಗೆ ಅನುಮತಿ ಕೇಳಿತ್ತು. ಈ ನಡುವೆ ಚುನಾವಣಾ ಆಯೋಗವೂ ರಾಷ್ಟ್ರಪತಿಗಳಿಗೆ ಪತ್ರ ಬರೆದು ಸಂದರ್ಭದಲ್ಲಿ ಪ್ರಧಾನಿಯನ್ನು ಹೊಗಳುವ ಮೂಲಕ ಕಲ್ಯಾಣ್ ಸಿಂಗ್ ಸಾಂವಿಧಾನಿಕ ಹುದ್ದೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ಹೇಳಿತ್ತು. ದೇಶಕ್ಕಾಗಿ ಮೋದಿಯನ್ನು ಮರು ಆಯ್ಕೆ ಮಾಡುವುದು ಅಗತ್ಯ ಎಂದು ಕಲ್ಯಾಣ್ ಸಿಂಗ್ ಹೇಳಿದ್ದರು ಅಷ್ಟೇ ಅಲ್ಲದೇ ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತ ಸಹ ಕೆಲಸ ಮಾಡಬೇಕೆಂದು ಕರೆ ನೀಡಿದ್ದರು.