ಮಡಿಕೇರಿ, ಏ. 4: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಕುತೂಹಲಕಾರಿ ಫಲಿತಾಂಶದೊಂದಿಗೆ, ಬಿಜೆಪಿ ಬೆಂಬಲಿತ ಅಧಿಕೃತ 8 ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಅಲ್ಲದೆ ಬಂಡಾಯ ಸ್ಪರ್ಧೆಯೊಡ್ಡಿದ್ದ ಇಬ್ಬರು ಗೆಲವು ದಾಖಲಿಸಿದ್ದು, ತಾವಿಬ್ಬರು ಬಿಜೆಪಿಯ ಪ್ರತಿನಿಧಿಗಳೆಂದು ‘ಶಕ್ತಿ’ಯೊಂದಿಗೆ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಸೋಮವಾರಪೇಟೆ ತಾಲೂಕಿನ ಒಂದು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಕಾಂಗ್ರೆಸ್ ಬೆಂಬಲಿತ ಬಿ.ಕೆ. ಚಿಣ್ಣಪ್ಪ ತಲಾ 9 ಮತಗಳ ಸಮಬಲ ಸಾಧಿಸಿದಾಗ, ಲಾಟರಿ ಮೂಲಕ ಅದೃಷ್ಟ ಪರೀಕ್ಷೆ ನಡೆಯಿತು. ಈ ವೇಳೆ ನಿರ್ದೇಶಕ ಸ್ಥಾನ ಮಣಿ ಉತ್ತಪ್ಪ ಅವರಿಗೆ ಕೈತಪ್ಪಿ, ಹಿರಿಯ ಸಹಕಾರಿ ಬಿ.ಕೆ. ಚಿಣ್ಣಪ್ಪ ಪಾಲಿಗೆ ವಿಜಯ ಲಭಿಸಿತು. ಒಟ್ಟು 13 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಉಳಿದಂತೆ ಸೋಮವಾರಪೇಟೆ ತಾಲೂಕಿನ ಇನ್ನೆರಡು ಸ್ಥಾನಗಳಲ್ಲಿ ಹಾಲಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ (16) ಹಾಗೂ ಎಸ್.ಬಿ. ಭರತ್ ಕುಮಾರ್ (14) ಮತಗಳಿಂದ ಗೆಲವು ದಾಖಲಿಸಿದರು. ವೀರಾಜಪೇಟೆ ತಾಲೂಕಿನ ಕೃಷಿ ಸಹಕಾರ ಸಂಘಗಳ ಮೂರು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಕೊಡಂದೇರ ಬಾಂಡ್ ಗಣಪತಿ (26), ಹೊಟ್ಟೆಂಗಡ ಎಂ. ರಮೇಶ್ (23), ಪಟ್ರಪಂಡ ರಘು ನಾಣಯ್ಯ (22) ಮತಗಳಿಂದ ಜಯಗಳಿಸಿದ್ದು, ಈ ತಾಲೂಕಿನಲ್ಲಿ ಸ್ಪರ್ಧೆಯಲ್ಲಿದ್ದ ಮಾತಂಡ ಸಿ. ಪೂವಯ್ಯ 8 ಮತ ಗಳಿಸಿ ಪರಾಜಯಗೊಂಡರು.(ಮೊದಲ ಪುಟದಿಂದ) ಮಡಿಕೇರಿ ಅಚ್ಚರಿ : ಅಂತೆಯೇ ಮಡಿಕೇರಿ ತಾಲೂಕಿನ 3 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಧಿಕೃತ ಅಭ್ಯರ್ಥಿಗಳಾಗಿದ್ದ ಹಾಲಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಎಸ್. ಹರೀಶ್ ಪೂವಯ್ಯ 15 ಮತಗಳಿಂದ ಗೆಲವು ಸಾಧಿಸಿದ್ದು, ಉಳಿದಂತೆ ಕೆ.ಎಂ. ತಮ್ಮಯ್ಯ (8) ಹಾಗೂ ತಳೂರು ಕಿಶೋರ್ ಕುಮಾರ್ (4) ಮತಗಳಿಂದ ಹಿನ್ನೆಡೆಗೊಂಡರು. ಇಲ್ಲಿ ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತ ಹೊಸೂರು ಸತೀಶ್ ಜೋಯಪ್ಪ 10 ಮತಗಳಿಂದ ಜಯ ಸಾಧಿಸಿದರೆ, ಬಿಜೆಪಿ ಬಂಡಾಯ ಸ್ಪರ್ಧೆಯಲ್ಲಿದ್ದ ಕಿಮ್ಮುಡಿರ ಎ. ಜಗದೀಶ್ (9) ಮತಗಳಿಂದ ಗೆಲುವಿನ ನಗೆ ಬೀರಿದರು. ತಾನು ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುವದಾಗಿಯೂ ಸ್ಪಷ್ಟಪಡಿಸಿದರು. ಇಲ್ಲಿ ಕಣದಲ್ಲಿದ್ದ ಬಿಜೆಪಿ ಹಿರಿಯ ಮುಖಂಡ ಎಂ.ಬಿ. ದೇವಯ್ಯ (6), ಕಾಂಗ್ರೆಸ್ ಬೆಂಬಲಿತ ಕೊಕ್ಕಲೆರ ಸುಜು ತಿಮ್ಮಯ್ಯ (5) ಮತಗಳಿಸಿ ಪರಾಜಯಗೊಂಡರು.
ಪಟ್ಟಣ ಬ್ಯಾಂಕ್ : ಇನ್ನು ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್‍ಗಳ ಪ್ರತಿನಿಧಿಯಾಗಿ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿ ನಡುವೆ ಹಾಲಿ ನಿರ್ದೇಶಕ ಕನ್ನಂಡ ಎ. ಸಂಪತ್ ಬಿಜೆಪಿ ಬೆಂಬಲಿತರಾಗಿ 11 ಮತ ಗಳಿಸಿ ಜಯ ಪಡೆದರೆ, ಪ್ರತಿಸ್ಪರ್ಧಿ ಟಿ.ಆರ್. ಶರವಣ ಕುಮಾರ್ 10 ಮತ ಪಡೆದು ಕೇವಲ 1 ಮತ ಅಂತರದಿಂದ ಪರಾಜಯ ಗೊಂಡರು.
ಮಹಿಳಾ ಕ್ಷೇತ್ರ : ಮತ್ತೊಂದೆಡೆ ಜಿಲ್ಲೆಯ ಮಹಿಳಾ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಒಂದು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ. ಉಷಾ ತೇಜಸ್ವಿ 6 ಮತಗಳನ್ನು ಪಡೆದು ಗೆಲವು ಸಾಧಿಸಿದರೆ, ಬಂಡಾಯ ಸ್ಪರ್ಧಿ ಲೀಲಾ ಮೇದಪ್ಪ 3 ಮತಗಳಿಂದ ಸೋಲೊಪ್ಪಿಕೊಂಡರು.
ಕುತೂಹಲದ ಕ್ಷಣ : ಅಂತೆಯೇ ಜಿಲ್ಲೆಯ ಇನ್ನಿತರ ಸಹಕಾರ ಸಂಘಗಳ ಒಂದು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಕೆ.ಎಂ. ಸೋಮಯ್ಯ ಅವರು ಕಣಕ್ಕೆ ಇಳಿದಿದ್ದು, 9 ಮತಗಳಿಂದ ಸೋಲನು ಭವಿಸಿದರು. ಇಲ್ಲಿ ಸ್ಪರ್ಧೆಗಿಳಿದಿದ್ದ ಅಪ್ಪಚೆಟ್ಟೋಳಂಡ ಕೆ. ಮನು ಮುತ್ತಪ್ಪ ಅತ್ಯಧಿಕ 20 ಮತ ಗಳಿಸಿ ಗೆಲವಿನ ನಗು ಬೀರಿದರು. ಅಲ್ಲದೆ ಈ ಗೆಲವು ಬಿಜೆಪಿಯದ್ದು ಎಂದು ‘ಶಕ್ತಿ’ಯೊಂದಿಗೆ ಸಮರ್ಥನೆ ನೀಡಿದರು.
ಇನ್ನೊಂದೆಡೆ ಜಿಲ್ಲೆಯ ಎಲ್ಲಾ ದವಸ ಭಂಡಾರಗಳ ಒಂದು ಕ್ಷೇತ್ರಕ್ಕೆ ಚುನಾವಣೆ ವೇಳೆ ಏಕೈಕ ಅಭ್ಯರ್ಥಿಯಾಗಿ ಕೋಲತಂಡ ಎ. ಸುಬ್ರಮಣಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆದಿತ್ತು. ಇಂದು ಬೆಳಿಗ್ಗೆಯಿಂದಲೇ ಚುನಾವಣಾ ರಂಗಿನೊಂದಿಗೆ ಬ್ಯಾಂಕ್ ಆವರಣದಲ್ಲಿ ಅಭ್ಯರ್ಥಿಗಳ ನಡುವೆ ಪೈಪೋಟಿಯ ಮತಬೇಟೆ ಎದುರಾಯಿತು. ಪಕ್ಷದ ಪರವಾಗಿ ಬಿಜೆಪಿ ಶಾಸಕದ್ವಯರಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸಹಿತ ಜಿಲ್ಲೆಯ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಕಾಣಿಸಿಕೊಂಡರು. ಇತರ ಅಭ್ಯರ್ಥಿ ಗಳು ತಮ್ಮ ಬೆಂಬಲಿಗರೊಂದಿಗೆ ಅಲ್ಲಲ್ಲಿ ನಿಂತು ಮತಕ್ಕಾಗಿ ಪ್ರಚಾರ ನಡೆಸುತ್ತಿದ್ದರು.
ಪೊಲೀಸ್ ಭದ್ರತೆ : ನಗರ ಪೊಲೀಸ್ ಠಾಣಾಧಿಕಾರಿ ಷಣ್ಮುಗ ಅವರ ನೇತೃತ್ವದಲ್ಲಿ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶವಾಗ ದಂತೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿ.ಪಂ. ಉಪ ಕಾರ್ಯದರ್ಶಿ ಭೀಮಸೇನ್ ಗುಡೂರು ಚುನಾವಣಾ ಧಿಕಾರಿಯಾಗಿ ಕಾರ್ಯನಿರ್ವ ಹಿಸಿದರು. ಸಂಜೆ 4 ಗಂಟೆ ಬಳಿಕ ಎಣಿಕೆ ಪ್ರಕ್ರಿಯೆಯೊಂದಿಗೆ ವಿಜೇತರ ಘೋಷಣೆ ಮಾಡಲಾಯಿತು.
ಜಿಲ್ಲಾಧಿಕಾರಿ ಪರಿಶೀಲನೆ : ಸ್ವತಃ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಚುನಾವಣಾ ವ್ಯವಸ್ಥೆಯ ಪರಿಶೀಲನೆ ನಡೆಸಿದರಲ್ಲದೆ, ಕಟ್ಟುಪಾಡುಗಳನ್ನು ಉಲ್ಲಂಘಿಸದಂತೆ ಸಹಕಾರ ನೀಡಬೇಕೆಂದು ಅಭ್ಯರ್ಥಿಗಳ ಸಹಿತ ರಾಜಕೀಯ ಮುಖಂಡರಿಗೆ ತಿಳಿಹೇಳಿದರು. ಬ್ಯಾಂಕ್ ಆಡಳಿತವನ್ನು ಮರಳಿ ಮಡಿಲಿಗೆ ಪಡೆದ ಬಿಜೆಪಿ ಪರವಾಗಿ ಪಕ್ಷದ ಕಾರ್ಯಕರ್ತರು ಜಯಘೋಷ ಮೊಳಗಿಸಿದರು.
ಕಳಗಿಗೆ ಅರ್ಪಣೆ : ಈಚೆಗೆ ರಸ್ತೆ ಅಪಘಾತದ ಸಂಚು ಮೂಲಕ ಕೊಲೆಗೀಡಾಗಿರುವ ಸಂಪಾಜೆ ಪಯಸ್ವಿನಿ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರಿಗೆ ತಮ್ಮ ಗೆಲವನ್ನು ಸಮರ್ಪಿಸುವದಾಗಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆ.ಎ. ಹರೀಶ್ ಪೂವಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.