ಮಡಿಕೇರಿ, ಏ. 4: ಅಪರಾಧ ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡು ಲೋಕಸಭಾ ಚುನಾವಣಾ ಹಿನ್ನೆಲೆ ಗಡಿಪಾರಿಗೆ ಒಳಗಾಗಿರುವ ರೌಡಿ ಶೀಟರ್‍ಗಳು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವಂತಿಲ್ಲ.ಈ ಕುರಿತು ‘ಶಕ್ತಿ’ಗೆ ಪ್ರತಿಕ್ರಿಯಿಸಿರುವ ಉಪ ವಿಭಾಗಾಧಿಕಾರಿ ಹಾಗೂ ಉಪ ವಿಭಾಗೀಯ ದಂಡಾಧಿಕಾರಿ ಜವರೇಗೌಡ ಅವರು ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಚುನಾವಣೆ ಸಂದರ್ಭ ಗಲಾಟೆ ಮಾಡಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲಿದ್ದಾರೆ ಎಂಬ ಕಾರಣಕ್ಕಾಗಿಯೆ ಅಂತಹ ರೌಡಿ ಶೀಟರ್‍ಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಆದ್ದರಿಂದ ಅವರುಗಳು ಮತಗಟ್ಟೆಗಳಿಗೆ ಬಂದು ಮತದಾನ ಮಾಡುವಂತಿಲ್ಲ. ಬದಲಿಗೆ ಅಗತ್ಯ ದಾಖಲೆ ಪಡೆದು ಅಂಚೆ ಮೂಲಕ ಮತ ಚಲಾವಣೆಗೆ ಅವಕಾಶವಿದೆ. ಗಡಿಪಾರಿಗೆ ಒಳಗಾದವರು ಮತದಾನ ಮಾಡಬೇಕಾದರೆ ಅವರಿಗೆ ನೀಡಲಾಗಿರುವ ಗಡಿಪಾರಿನ ಆದೇಶದ ಪ್ರತಿಯೊಂದಿಗೆ ಮತದಾನಕ್ಕೆ ಬೇಕಾದ ಮತ ಪತ್ರವನ್ನು ಕಳುಹಿಸಿಕೊಡುವಂತೆ ಕೋರಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಪತ್ರ ಬರೆಯಬಹುದು. ಚುನಾವಣಾಧಿಕಾರಿಗಳು ಪತ್ರವನ್ನು ಪರಿಶೀಲಿಸಿ ಮತ ಪತ್ರವನ್ನು ಕಳುಹಿಸಿಕೊಡುತ್ತಾರೆ. ಆ ಮೂಲಕ ಅಂಚೆ ಮತದಾನ ಮಾಡಬಹುದಾಗಿದೆ.

ಮತ ಪತ್ರ ಕಳುಹಿಸಿಕೊಟ್ಟಿರುವ ಬಗ್ಗೆ ಮತಪಟ್ಟಿಯಲ್ಲಿ ನಮೂದಿಸುವದರಿಂದ ಗಡಿಪಾರಿಗೊಳಗಾದವರ ಹೆಸರಿನಲ್ಲಿ ಬೇರೆ ಯಾರೂ ಕೂಡ ಮತದಾನ ಮಾಡಲು ಸಾಧ್ಯವಾಗುವದಿಲ್ಲ ಎಂದು ಜವರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಜಿಲ್ಲೆಯಿಂದ ರೌಡಿ ಶೀಟರ್‍ಗಳಾದ ಮಡಿಕೇರಿಯ ಟಿ.ಕೆ. ಕಾವೇರಪ್ಪ, ವೀರಾಜಪೇಟೆಯ ಎನ್.ಎ. ಮಹಮ್ಮದ್ ಆಲಿ, ಪೊನ್ನಂಪೇಟೆಯ ಎ.ಎಸ್. ಪ್ರತಾಪ್, ಗೋಣಿಕೊಪ್ಪದ ಹೆಚ್.ಬಿ. ಮುರುಗ, ಸೋಮವಾರಪೇಟೆಯ ಕರೀಂಬೇಗ್ ಇವರುಗಳನ್ನು ಉಪವಿಭಾಗಾಧಿಕಾರಿ ಜವರೇಗೌಡ ಅವರು ಚುನಾವಣೆ ಮುಗಿಯುವವರೆಗೂ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.