ವೀರಾಜಪೇಟೆ, ಏ. 4: ಕಳೆದ ಐದು ದಿನಗಳ ಹಿಂದೆ ಕೆದಮುಳ್ಳೂರು ಬಳಿಯ ಪಾಲಂಗಾಲದಲ್ಲಿ ಹೊಸ ದಾದ ಕೆರೆಗೆ ಆಕಸ್ಮಿಕವಾಗಿ ಬಿದ್ದಿದ್ದ ಸುಮಾರು ಎಂಟು ವರ್ಷ ಪ್ರಾಯದ ಗಂಡು ಮರಿಯಾನೆಗೆ ನಿನ್ನೆ ದಿನ ಯಾರೋ ಗುಂಡು ಹಾರಿಸಿ ಹತ್ಯೆಗೊಳಿಸಿರುವದಾಗಿ ಗೊತ್ತಾಗಿದೆ. ಇಂದು ಬೆಳಿಗ್ಗೆ ಆನೆಯ ಶವ ಪಾಲಂಗಾಲದಲ್ಲಿ ಪತ್ತೆಯಾಗಿದೆ.ಕಳೆದ ಶನಿವಾರ ಬೆಳಗಿನ ಜಾವ ಈ ಮರಿಯಾನೆ ಕೆರೆಗೆ ಬಿದ್ದು ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ಈ ಕಾಡಾನೆಯನ್ನು ಅರಣ್ಯ ಇಲಾಖೆ, ಗ್ರಾಮಸ್ಥರ ಸಹಕಾರದಿಂದ ಮೇಲೆತ್ತಿದ್ದರು. ಕಾಡಾನೆ ಗಾಬರಿ ಯಿಂದ ರೋಷದಲ್ಲಿ ಓಡುತ್ತಿದ್ದಾಗ ಆನೆ ಓಡುವ ದಾರಿಯಲ್ಲಿದ್ದ ಇಲಾಖೆಗೆ ಸೇರಿದ ಜೀಪು, ಖಾಸಗಿ ಜೀಪು, ಕಾರು ಹಾಗೂ ಒಂದು ಬೈಕನ್ನು ಜಖಂಗೊಳಿಸಿತ್ತು.ನಂತರ ಆನೆ ನಾಲ್ಕುದಿನಗಳಿಂದ ಹೆಗ್ಗಳ, ಬೂದಿಮಾಳ, ಕೆದಮುಳ್ಳೂರು, ಪಾಲಂಗಾಲ ಸುತ್ತಮುತ್ತಲ ಪ್ರದೇಶದಲ್ಲಿ ಸಂಚರಿಸುತ್ತಿದ್ದುದನ್ನು ಈ ವಿಭಾಗದ ಗ್ರಾಮಸ್ತರು ನೋಡಿದ್ದಾರೆ.ನಿನ್ನೆ ದಿನ ಅಪರಾಹ್ನ ಮೂರು ಗಂಟೆಯ ಸಮಯದಲ್ಲಿ ಪಾಲಂಗಾಲ ಗ್ರಾಮದ ಕರಿನೆರವಂಡ ಕಾಶಿ ಎಂಬವರ ಕಾಫಿ ತೋಟದ ಅಂಚಿನ ಗದ್ದೆಯಲ್ಲಿ ಕಾಡಾನೆಯ ಕಳೇಬರ ಪತ್ತೆಯಾಗಿದೆ. ತಕ್ಷಣ ಗ್ರಾಮಸ್ತರು ಅರಣ್ಯ ಇಲಾಖೆಗೆ ಸುಳಿವು ನೀಡಿದ್ದಾರೆ. ಆನೆಯ ಹೊಟ್ಟೆಯ ಬಲ ಭಾಗಕ್ಕೆ ಗುಂಡೇಟು ಬಿದ್ದಿರುವದು ಗೋಚರವಾಗಿದೆ.ಕಳೆದ ಶನಿವಾರ ಅರಣ್ಯ ಇಲಾಖಾ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟಿದ್ದ ಈ ಗಂಡು ಆನೆ ಮರಿ ಇದೀಗ ಈ ಬುಧವಾರ ಅನಾಮಧೇಯರ ಗುಂಡೇಟಿಗೆ ಬಲಿಯಾಗಿದೆ. ಇಂದು ಪಾಲಂಗಾಲ ದಲ್ಲಿಯೇ ಶವ ಪತ್ತೆಯಾಗಿದೆ.

(ಮೊದಲ ಪುಟದಿಂದ) ವೀರಾಜಪೇಟೆ ಅರಣ್ಯ ಉಪ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತ ರಾಜು ಅವರ ಪ್ರಕಾರ ‘ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ನಾಗರಹೊಳೆ ಅಭಯಾರಣ್ಯ ಪ್ರದೇಶದ ವನ್ಯಜೀವಿ ತಜ್ಞ ವೈದ್ಯ ಡಾ. ಮುಜೀಬ್ ಅವರು ಸತ್ತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆನೆಯ ಒಂದು ಬದಿಯಲ್ಲಿ ಗುಂಡು ಹೊಕ್ಕಿರುವದು ಗೋಚರವಾಗಿದೆ.

ಎಸ್‍ಬಿಬಿಎಲ್ ಕೋವಿಯಿಂದ ಗುಂಡು ಹಾರಿಸಿರುವದು ಖಾತರಿಯಾಗಿದೆ’ ಆದರೆ, ಇನ್ನು ಕೂಡ ಆರೋಪಿ ಯಾರು ಎಂಬದು ಪತ್ತೆಯಾಗಿಲ್ಲ. ಈ ಕುರಿತು ತನಿಖೆ ನಡೆಯುತ್ತಿರುವದಾಗಿ ಅಧಿಕಾರಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.