ಮಡಿಕೇರಿ, ಏ. 3: ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ಬಾಲಕರ ವಸತಿ ನಿಲಯದ ಆವರಣದಲ್ಲಿ ಇದೇ ಪ್ರಥಮ ಬಾರಿಗೆ ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರ ಆಸಕ್ತಿ ಮೇರೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕಿರಣ್ ಕಾರ್ಯಪ್ಪ ಅವರು; ಕ್ರೀಡಾಕ್ಷೇತ್ರದಲ್ಲಿ ಸಾಧನೆ ತೋರುವದರೊಂದಿಗೆ ಉನ್ನತ ಶಿಕ್ಷಣವನ್ನೂ ಪಡೆದುಕೊಳ್ಳಬೇಕು. ಆ ಮೂಲಕ ಓದಿದ ಶಾಲೆಗೆ, ಗುರುಗಳಿಗೆ ಹೆಸರು ತಂದುಕೊಡಬೇಕು, ಹಿಂದೆ ಓದಿದ ಶಾಲೆಯೊಂದಿಗೆ ಸಂಪರ್ಕವಿರಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇದೇ ಸಂದರ್ಭ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಾಗೂ ಅನುಭವಗಳನ್ನು ಹಂಚಿಕೊಂಡರು. ಹಾಸ್ಟೆಲ್‍ನಿಂದ ಹೊರ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು. ಇದರೊಂದಿಗೆ ಕೆ.ಎಸ್. ಸುರಕ್ಷ ಹಾಗೂ ಟಿ.ಸಿ. ಸುಚಿತ ಅವರುಗಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮದ ಮೂಲಕ ರಂಜಿಸಿದರು. ಹಾಸ್ಟೆಲ್ ಮೇಲ್ವಿಚಾರಕ ಮಂಜುನಾಥ್, ಬಾಲಕಿಯರ ನಿಲಯದ ಮೇಲ್ವಿಚಾರಕಿ ಪ್ರೀತಾ, ತರಬೇತುದಾರರಾದ ಚಂಗಪ್ಪ ಹಾಗೂ ಸುಬ್ಬಯ್ಯ, ಪೋಷಕರು, ಹಾಸ್ಟೆಲ್ ಸಿಬ್ಬಂದಿಗಳಿದ್ದರು.