ಸುಂಟಿಕೊಪ್ಪ, ಏ. 3: ಶಿಕ್ಷಣ ಹಾಗೂ ಆರೋಗ್ಯ ನಮ್ಮ ದೇಶದ ಬಲಿಷ್ಠವಾದ ಕಂಬಗಳಾಗಿದ್ದು ಈ ಕ್ಷೇತ್ರದಲ್ಲಿ ಮಹಿಳೆಯರದ್ದೇ ಸಿಂಹಪಾಲಾಗಿದೆ ಎಂದು ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾ. ಎಡ್ವರ್ಡ್ ವಿಲಿಯಂ ಸಾಲ್ಡಾನಾ ಹೇಳಿದರು.
ಸಂತ ಅಂತೋಣಿ ಶಾಲಾ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದಾದ್ಯಂತ ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ಮಹಿಳೆಯರೇ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಆರೋಗ್ಯ ಇಲಾಖೆಯಲ್ಲಿ ದಾದಿಯರೇ ಅಧಿಕವಾಗಿದ್ದು ರಾಷ್ಟ್ರ ನಿರ್ಮಾಣದಲ್ಲಿ ಇವರುಗಳ ಪಾತ್ರ ಮಹತ್ವದಾಗಿದೆ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಸಮಿತಿಯ ಅಪ್ತ ಸಮಾಲೋಚಕಿ ಸಿಸ್ಟರ್ ಮಿಲಾಗ್ರಿಸ್ ಮಾತನಾಡಿ, ಮಕ್ಕಳ ಪಾಲನೆ, ಪೋಷಣೆಯಲ್ಲಿ ಅವರಿಗೆ ಶಿಕ್ಷಣಕೊಡಿಸಿ ಸಂಸ್ಕಾರ, ಒಳ್ಳೆಯ ಗುಣಗಳನ್ನು ಕಲಿಸಿ ಸತ್ಪ್ರಜೆಯಾಗಿ ಮಾಡುವಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ. ಕೇವಲ ವಿದ್ಯೆ ಕೊಡಿಸಿ ಪೋಷಕರು ತಮ್ಮ ಜವಾಬ್ದಾರಿ ಮುಗಿಯಿತು ಎಂದು ತಿಳಿದುಕೊಳ್ಳದೆ ಶಾಲೆ-ಕಾಲೇಜಿಗೆ ತೆರಳಿ ಅವರ ಶಿಕ್ಷಣದ ಪ್ರಗತಿ ಬಗ್ಗೆ, ಗುಣ ನಡತೆ ಬಗ್ಗೆ ವಿಚಾರಿಸಿಕೊಳ್ಳುವ ಅಗತ್ಯತೆ ಇದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವಲಯ ಮೇಲ್ವಿಚಾರಕ ಗುರುಗಳಾದ ಫಾ. ಲೈನ್ಸ್ ಮೊರೆಸ್ ಯಾವದೇ ಸಮಸ್ಯೆಯನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ನೋಡದೆ ಒಗ್ಗಟ್ಟಾಗಿ ವಿಶಾಲ ಮನೋಭಾವನೆಯಿಂದ ಬಗೆಹರಿಸಲು ಮಹಿಳೆಯರು ಮುಂದೆ ಬರಬೇಕು ಎಂದರು.
ಸಮಾರಂಭದ ವೇದಿಕೆಯಲ್ಲಿ ಜಿಲ್ಲಾ ಘಟಕ ಅಧ್ಯಕ್ಷೆ ಜೂಡಿತ್ ಮಸ್ಕಾರನೇಸ್, ಡಿಕ್ಕನ್ ಪ್ರಾನ್ಸಿಸ್ ಜಾಕ್ಸನ್ ಪಿ.ಜೆ., ಬ್ರದರ್ ಜಾನ್ ಸಂತಕ್ಲಾರ ಕನ್ಯಾಸ್ತ್ರೀಮಠದ ಮದರ್ ಸೂಪಿರಿಯರ್ ಸಿಸ್ಟರ್ ವೈಲೆಟ್ ಹಾಗೂ ರೀಟಾ ಸೆಲ್ವರಾಜ್ ಇದ್ದರು.
ದಿನದ ಅಂಗವಾಗಿ ಮಹಿಳೆಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಮೊದಲಿಗೆ ಮಹಿಳಾ ಸಂಘದ ಪದಾಧಿಕಾರಿಗಳು ಪ್ರಾರ್ಥಿಸಿ, ರೀಟಾ ಸ್ವಾಗತಿಸಿ, ರೀನಾ ಪ್ಲವಿನ ಲೋಬೋ ನಿರೂಪಿಸಿದರು.