ಮಡಿಕೇರಿ, ಏ. 3: ಲೋಕಸಭಾ ಚುನಾವಣೆಯ ಮತದಾನದಂದು ವಿಶೇಷ ಚೇತನರನ್ನು ಮತಗಟ್ಟೆ ಕೇಂದ್ರಗಳಿಗೆ ಕರೆದುಕೊಂಡು ಹೋಗಿ ಬರಲು ಸಾರಿಗೆ ವ್ಯವಸ್ಥೆ, ವೀಲ್ಚೇರ್ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಟಿ.ಕೆ. ಅನಿಲ್ ಕುಮಾರ್ ಅವರು ಸೂಚಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ವಿಶೇಷ ಚೇತನರಿಗೆ ಮತದಾನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತಾಗಲು ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.
ಜಿಲ್ಲೆಯ ಮತಗಟ್ಟೆ ಕೇಂದ್ರಗಳಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಇತರ ಮೂಲ ಸೌಲಭ್ಯಗಳಿವೆ. ಇದರ ಜೊತೆಗೆ ಸರಿಯಾದ ರಸ್ತೆ ಮಾರ್ಗ ಇರಬೇಕು ಎಂದು ಅವರು ಹೇಳಿದರು.
ಕೊಡಗು ಜಿಲ್ಲೆ ಮಲೆನಾಡು ಪ್ರದೇಶವಾಗಿದ್ದು, ಜಿಲ್ಲೆಯಲ್ಲಿ ಶಾಲೆಗಳು ಇಳಿಜಾರು ಅಥವಾ ಎತ್ತರ ಪ್ರದೇಶದಲ್ಲಿರುತ್ತವೆ. ಮುಖ್ಯ ರಸ್ತೆಯಿಂದ ಮತಗಟ್ಟೆ ಕೇಂದ್ರಗಳಿಗೆ ತೆರಳಲು ಸರಿಯಾದ ರಸ್ತೆ ಮಾರ್ಗ ಇರಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.
ಮತದಾನದಂದು ಮತಗಟ್ಟೆಗೆ ಕರೆದುಕೊಂಡು ಬರಲು ಮತ್ತು ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ರ್ಯಾಂಪ್ ಇರಬೇಕು ಎಂದು ನಿರ್ದೇಶನ ನೀಡಿದರು.
ಮತಗಟ್ಟೆ ಕೇಂದ್ರಗಳಲ್ಲಿ ಸ್ವಯಂ ಪ್ರೇರಣೆಯಿಂದ ಕೆಲಸ ನಿರ್ವಹಿಸುವವರನ್ನು ನಿಯೋಜಿಸುವಾಗ ಎಚ್ಚರಿಕೆ ವಹಿಸಬೇಕು. ಯಾವದೇ ರೀತಿಯ ದೂರು ಬರದಂತೆ ಗಮನಹರಿಸಬೇಕು ಎಂದು ಸೂಚಿಸಿದರು.
ಚುನಾವಣಾ ಆಯೋಗವು ಈ ಬಾರಿ ವಿಶೇಷ ಚೇತನರು ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತದಾನ ಮಾಡುವಂತಾಗಲು ವಿಶೇಷ ಗಮನ ನೀಡುವದರ ಜೊತೆಗೆ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದ್ದು, ಅದನ್ನು ಪಾಲಿಸುವಂತೆ ಸೂಚಿಸಿದರು.
ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಕೆ.ಲಕ್ಷ್ಮಿಪ್ರಿಯಾ ಅವರು ಜಿಲ್ಲೆಯಲ್ಲಿ 3,090 ವಿಶೇಷ ಚೇತನರಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,696 ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,394 ವಿಶೇಷ ಚೇತನರು ಇದ್ದಾರೆ. ಇವರಲ್ಲಿ 1,978 ಪುರುಷರು ಮತ್ತು 1,112 ಮಹಿಳಾ ವಿಶೇಷ ಚೇತನರು ಇದ್ದಾರೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಜಿಲ್ಲೆಯ 543 ಮತಗಟ್ಟೆಗಳಲ್ಲಿ ರ್ಯಾಂಪ್ ವ್ಯವಸ್ಥೆ ಮಾಡಲಾಗಿದೆ. 357 ವೀಲ್ ಚೇರ್, 463 ಕಡೆ ಭೂತ ಕನ್ನಡಿ, 380 ಮತಗಟ್ಟೆಗಳಲ್ಲಿ ಬ್ರೈಲ್ ಲಿಫಿ ಹಾಗೂ ಬ್ರೈಲ್ ಮತ ಚೀಟಿ, ಹಾಗೆಯೇ 146 ಜೀಪು ಮತ್ತು ಆಟೋ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಹಾಗೂ 670 ಮಂದಿ ವಾಲೆಂಟರೀಸ್ ಅವರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಾಗೆಯೇ ಗ್ರಾ.ಪಂ.ಮಟ್ಟದಲ್ಲಿ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಹಾಗೂ ವಿವಿದ್ದೋದ್ದೇಶ ಪುನರ್ ವಸತಿ ಕಾರ್ಯಕರ್ತರನ್ನು ಕರೆದುಕೊಂಡು ಹೋಗಿ ಬರಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಮತದಾನದ ಮಹತ್ವ ಕುರಿತು ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ನಾಗರಿಕರಿಂದ ಕ್ಯಾಂಡಲ್ ಮಾರ್ಚ್, ಇವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಅರಿವು, ಜಾಥ, ರ್ಯಾಲಿ, ಓಟ, ಬೀದಿ ನಾಟಕ, ಮತದಾನದ ಮಹತ್ವ ಕುರಿತು ಸಂದೇಶ ಸಾರಲು ವಿಶೇಷ ಚೇತನರನ್ನು ರಾಯಭಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮತಗಟ್ಟೆ ಕೇಂದ್ರಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರ್ಯಾಂಪ್ ವ್ಯವಸ್ಥೆ ಮತ್ತಿತರ ಸೌಲಭ್ಯಗಳ ಜೊತೆಗೆ ಮುಖ್ಯ ರಸ್ತೆಯಿಂದ ಮತಗಟ್ಟೆ ಕೇಂದ್ರಗಳಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವದು ಎಂದು ತಿಳಿಸಿದರು.
ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಅಧಿಕಾರಿ ದೇವರಾಜು ಅವರು ವಿಶೇಷಚೇತನರು ಮತದಾನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತಾಗಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಜಿ.ಪಂ.ಉಪ ಕಾರ್ಯದರ್ಶಿ ಹಾಗೂ ಮತಗಟ್ಟೆ ಕೇಂದ್ರಗಳ ನೋಡಲ್ ಅಧಿಕಾರಿ ಗುಡೂರು ಭೀಮಸೇನ, ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಮೋಹನ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆಂಚಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಚ್ಚಾಡೋ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಅರುಂಧತಿ, ಪೌರಾಯುಕ್ತ ಎಂ.ಎಲ್.ರಮೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ, ಶಿವಣ್ಣ, ನವೀನ್, ಅನಿಲ್ ಕುಮಾರ್ ಇತರರು ಇದ್ದರು.