ಮಡಿಕೇರಿ, ಏ. 3: ‘ಒಳ್ಳೆಯದು ಕಂಡಾಗ ಮಾತು ಹೆಚ್ಚಾಗಿರಲಿ, ಕೆಟ್ಟದ್ದು ಕಂಡಾಗ ಮಾತು ಕಡಿಮೆ ಇರಲಿ’. ಮಾತು ಒಳ್ಳೆಯದನ್ನು ಸಮಾಜಕ್ಕೆ ಸಾರುವಂತೆ ಇರಬೇಕು ಎಂದು ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಅಜಿತ್ ನಾಣಯ್ಯ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಎಂ. ಬಾಡಗ ಶ್ರೀ ಭಗವತಿ ದೇವಸ್ಥಾನ ಸಮಿತಿ ಸಹಯೋಗದಲ್ಲಿ ಜನರಲ್ ತಿಮ್ಮಯ್ಯ ಅವರ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಪ್ರಕೃತಿ ಅಧ್ಯಯನ ಮತ್ತು ಸಮುದಾಯದ ಅಭಿವೃದ್ಧಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಾಪೋಕ್ಲು ಕೊಡವ ಸಮಾಜ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಅವಕಾಶ ಸಿಕ್ಕಿದಾಗ ಸರಿಯಾಗಿ ಬಳಸಿಕೊಂಡು ತಂದೆ-ತಾಯಿ ಇತರರಿಗೆ ಗೌರವ ನೀಡಬೇಕು. ಸ್ನೇಹಿತರಿಗೆ ಕೃತಜ್ಞರಾಗಿದ್ದು ಭೂ ತಾಯಿಗೆ ತಲೆ ಭಾಗಬೇಕು. ಭೂ ತಾಯಿಗೆ ತಲೆ ಭಾಗುವ ಭತ್ತ ದೇವರ ನೈವೇದ್ಯ ಕ್ಕೆ ಒಳಗಾಗುತ್ತದೆ ಆದರೆ ನೇರ ನಿಲ್ಲುವ ಜೋಳ ದೇವರ ಪಾತ್ರಕ್ಕೆ ಒಳಗಾಗುವದಿಲ್ಲ. ಆದ್ದರಿಂದ ನಮ್ಮ ಸಂಸ್ಕೃತಿ ಆಚರಣೆ, ಪದ್ಧತಿಗಳಿಗೆ ತಲೆಬಾಗಬೇಕು. ಪ್ರತಿಯೊಬ್ಬರಲ್ಲೂ ಶಕ್ತಿ, ವೈಫಲ್ಯ ಪ್ರೀತಿ ದ್ವೇಷ ಎಲ್ಲಾ ಇರುತ್ತದೆ ಅದರೇ ಅವಕಾಶ ಬಳಸಿಕೊಂಡು ಎಲ್ಲವನ್ನೂ ಪ್ರೀತಿಯಿಂದ ಗೆಲ್ಲಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ, ಪ್ರತಿಯೊಬ್ಬರಲ್ಲೂ ದೇಶ ಅಭಿಮಾನ ವಿರಬೇಕು. ನಮ್ಮ ದೇಶದ ಮಹಾನ್ ವ್ಯಕ್ತಿ ಜನರಲ್ ತಿಮ್ಮಯ್ಯ ಅವರಿಗೆ ದೇಶದ ಬಗ್ಗೆ ಅಪಾರ ಅಭಿಮಾನವಿತ್ತು. ಆದ್ದರಿಂದ ಅವರ ಹೆಸರು ಕೇಳಿದರೆ ನಮಗೂ ದೇಶಾಭಿಮಾನ ಮೂಡುತ್ತದೆ ಎಂದರು.
ಸಮಾರೋಪ ಭಾಷಣ ಮಾಡಿದ ಕೊಡಗು ಸ್ಕೌಟ್ಸ್ ಅಯುಕ್ತ ಜಿಮ್ಮಿ ಸಿಕ್ವೆರಾ, ಶಿಸ್ತು, ಸಮಯ ಪ್ರಜ್ಞೆ, ಸಹಬಾಳ್ವೆ ಇರಬೇಕು ಆಗ ಮಾತ್ರ ವ್ಯಕ್ತಿತ್ವ ವಿಕಾಸವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕೋಟೆರ ಪೃಥ್ವಿ ತಿಮ್ಮಯ್ಯ, ಪೆಮ್ಮಂಡ ಗೀತಾ ಪವಿತ್ರ, ಕಂಬಿರಂಡ ಕಿಟ್ಟು ಕಾಳಪ್ಪ ಉಪಸ್ಥಿತರಿದ್ದರು. ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೋವರ್ ಲೀಡರ್ ವನಿತ್ಕುಮಾರ್.ಎಂ.ಎನ್ ಸ್ವಾಗತಿಸಿ, ರೇಂಜರ್ ಲೀಡರ್ ರಾಖಿ ಪೂವಣ್ಣ ವಂದಿಸಿದರು, ವಿದ್ಯಾರ್ಥಿ ತಮ್ಮಯ್ಯ ನಿರೂಪಿಸಿದರು.