ಸೋಮವಾರಪೇಟೆ, ಏ.3: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪಂಚಾಯಿತಿ ಅಗತ್ಯ ಕ್ರಮ ಕೈಗೊಂಡಿದ್ದು, ಬರ ನಿರ್ವಹಣೆ ಯೋಜನೆಯಡಿ ಈಗಾಗಲೇ 15 ಲಕ್ಷ ಅನುದಾನಕ್ಕೆ ಟೆಂಡರ್ ಕರೆಯುವ ಹಂತದಲ್ಲಿದೆ.ಈವರೆಗೆ ಪಟ್ಟಣ ಪಂಚಾಯಿತಿ ಯಲ್ಲಿ ಕುಡಿಯುವ ನೀರಿಗೆ ಯಾವದೇ ಸಮಸ್ಯೆ ಬಾರದಂತೆ ಅಗತ್ಯ ಕ್ರಮ ಕೈಗೊಂಡಿರುವ ಮುಖ್ಯಾಧಿಕಾರಿ ನಟರಾಜ್ ಅವರು, ಪಟ್ಟಣಕ್ಕೆ ಕುಡಿಯುವ ನೀರನ್ನೊದಗಿಸುವ ಪ್ರಮುಖ ಜಲಮೂಲವಾದ ದುದ್ದುಗಲ್ಲು ಮತ್ತು ಹಾರಂಗಿ ಹೊಳೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ್ದಾರೆ.ದುದ್ದುಗಲ್ಲು ಹೊಳೆಯಲ್ಲಿ ನಿರ್ಮಿಸಿರುವ ಚೆಕ್‍ಡ್ಯಾಂನಲ್ಲಿ ತುಂಬಿದ್ದ ಹೂಳನ್ನು ಜೆಸಿಬಿ ಯಂತ್ರದಿಂದ ತೆಗೆದು ನೀರಿನ ಶೇಖರಣೆಗೆ ಕ್ರಮ ಕೈಗೊಂಡಿದ್ದು, ಸ್ಯಾಂಡ್ ಬ್ಯಾಗ್‍ಗಳನ್ನು ಅಳವಡಿಸಿ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಲು ಕ್ರಮ ಕೈಗೊಂಡಿದ್ದಾರೆ.ಇದರೊಂದಿಗೆ ಹಾರಂಗಿಯಿಂದ ನೀರು ಸರಬರಾಜಾಗುವ ಮಾಡುವ ಮೋಟಾರ್‍ನ್ನು ದುರಸ್ತಿ ಪಡಿಸಿದ್ದು, ಕುಡಿಯುವ ನೀರಿಗೆ ಕೊರತೆಯಾಗುವ ಆತಂಕ ಜನರಲ್ಲಿ ಬೇಡ ಎಂದು ಭರವಸೆ ನೀಡಿದ್ದಾರೆ. ಬರ ನಿರ್ವಹಣೆ ಯಿಂದ ಪಟ್ಟಣ ಪಂಚಾಯಿತಿಗೆ 15 ಲಕ್ಷ ರೂಪಾಯಿ ಅನುದಾನ ಬಂದಿದೆ. ಈ ಅನುದಾನ ದಲ್ಲಿ ಪೈಪ್‍ಲೈನ್, ಮೋಟಾರ್ ದುರಸ್ತಿ, ಬೋರ್‍ವೆಲ್, ಪಂಪ್‍ಸೆಟ್ ದುರಸ್ತಿಗಾಗಿ ಕ್ರಿಯಾ ಯೋಜನೆ ತಯಾರಿಸಿ, ಜಿಲ್ಲಾಧಿಕಾರಿ ಗಳಿಗೆ ಸಲ್ಲಿಸಿದ್ದು, ಅಲ್ಲಿಂದಲೂ ಅನುಮೋದನೆ ದೊರೆತಿದೆ. ಒಂದೆರಡು ದಿನದಲ್ಲಿ ಟೆಂಡರ್ ಸಹ ಕರೆಯ ಲಾಗುವದು ಎಂದು ಮುಖ್ಯಾಧಿಕಾರಿ ನಟರಾಜ್ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿ ದ್ದಾರೆ.ಹಾರಂಗಿ ಮತ್ತು ದುದ್ದುಗಲ್ಲು ಹೊಳೆಯಲ್ಲಿ ಅಗತ್ಯ ನೀರಿನ ಸಂಗ್ರಹ ಮಾಡಲಾಗಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ 2 ದಿನಕ್ಕೊಮ್ಮೆ 1 ಗಂಟೆಗಳ ಕಾಲ ನೀರು ಒದಗಿಸಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಗಾಗಿಯೇ ದುದ್ದುಗಲ್ಲಿನಲ್ಲಿ ನಾಲ್ವರು, ಯಡವನಾಡು ಪಂಪ್‍ಹೌಸ್‍ನಲ್ಲಿ ಈರ್ವರು, ಪಟ್ಟಣದಲ್ಲಿ 6 ಮಂದಿ ವಾಲ್‍ಮೆನ್‍ಗಳಿದ್ದು, ಒಟ್ಟು 12 ಮಂದಿ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ.
ಇದರ ಜತೆಗೆ ಪೈಪ್‍ಲೈನ್, ಮೋಟಾರ್ ದುರಸ್ತಿ ಸೇರಿದಂತೆ ಇನ್ನಿತರ ಅಗತ್ಯ ಸಂದರ್ಭದಲ್ಲಿ ಕಾಮಗಾರಿ ನಿರ್ವಹಿಸಲು ಪಂಚಾಯಿತಿಯ ವಾಟರ್ ಸಪ್ಲೈ ಫಂಡ್‍ನಲ್ಲಿಯೂ ಹಣವನ್ನು ಮೀಸಲಿರಿಸಲಾಗಿದೆ.(ಮೊದಲ ಪುಟದಿಂದ) ಪ್ರಸ್ತುತ ಹಾರಂಗಿಯಿಂದ ಯಡವನಾಡು ಮಾರ್ಗವಾಗಿ ಸೋಮವಾರಪೇಟೆಗೆ ಹೆಚ್ಚಿನ ಪ್ರಮಾಣದ ನೀರು ಸರಬರಾಜಾಗುತ್ತಿದೆ. ಮಾರ್ಗ ಮಧ್ಯದ ಬೇಳೂರು ಬಾಣೆಯಲ್ಲಿರುವ ಶುದ್ಧೀಕರಣ ಘಟಕದಲ್ಲಿ ಒಮ್ಮೆ ಶುದ್ಧಗೊಂಡು ನಂತರ ಪಟ್ಟಣದ ಮಾನಸ ಹಾಲ್ ಬಳಿಯಿರುವ ಶುದ್ಧೀಕರಣ ಕೇಂದ್ರದಲ್ಲಿ ಎರಡನೇ ಬಾರಿ ಶುದ್ಧೀಕರಣವಾಗಿ ಓವರ್‍ಹೆಡ್ ಟ್ಯಾಂಕ್‍ಗಳಲ್ಲಿ ಶೇಖರಿಸಲಾಗುತ್ತಿದೆ.
ಪಟ್ಟಣದ ತಾಲೂಕು ಕಚೇರಿ ಬಳಿ 1ಲಕ್ಷ ಲೀಟರ್ ಶೇಖರಣಾ ಸಾಮಥ್ರ್ಯವಿರುವ 2 ಓವರ್‍ಹೆಡ್ ಟ್ಯಾಂಕ್ ಸೇರಿದಂತೆ, ಬಸವೇಶ್ವರ ರಸ್ತೆ, ಕರ್ಕಳ್ಳಿಯಲ್ಲಿರುವ ನೀರಿನ ಟ್ಯಾಂಕ್‍ಗಳ ಮೂಲಕ ಪ್ರತಿ ಮನೆಗೂ ನೀರು ಒದಗಿಸಲಾಗುತ್ತಿದೆ. ಬಾಣಾವರ ರಸ್ತೆಯಲ್ಲಿ ನೂತನವಾಗಿ ಕುಡಿಯುವ ನೀರಿನ ಟ್ಯಾಂಕ್‍ನ್ನು ನಿರ್ಮಿಸಲಾಗುತ್ತಿದೆ.
ಪಟ್ಟಣ ವ್ಯಾಪ್ತಿಯಲ್ಲಿ 1700 ಮನೆಗಳಿಗೆ ಅಗತ್ಯಕ್ಕೆ ತಕ್ಕಷ್ಟು ನೀರು ಒದಗಿಸಲಾಗುತ್ತಿದೆ. ಇದರೊಂದಿಗೆ ನೀರಿನ ಸಂಪರ್ಕ ಪಡೆದಿರುವ 100ಕ್ಕೂ ಅಧಿಕ ಹೊಟೇಲ್, ಕ್ಯಾಂಟೀನ್, ಅಂಗಡಿಗಳಿಗೂ ನೀರು ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಎರಡೂ ಜಲಮೂಲಗಳಲ್ಲಿ ತಿಂಗಳಿಗೆ ಬೇಕಾಗುವಷ್ಟು ನೀರಿನ ಸಂಗ್ರಹವಿದೆ ಎಂದು ಮುಖ್ಯಾಧಿಕಾರಿ ನಟರಾಜ್ ಮಾಹಿತಿ ನೀಡಿದ್ದಾರೆ. - ವಿಜಯ್ ಹಾನಗಲ್