ಸೋಮವಾರಪೇಟೆ, ಏ. 3: ದೇಶದಲ್ಲಿ ಈವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ದೇಶದ ಅಭಿವೃದ್ಧಿ ಅಸಾಧ್ಯವಾಗಿದೆ. ಬಿಜೆಪಿ ಕೋಮುವಾದಿ ಆಡಳಿತಕ್ಕೆ ಕಾಂಗ್ರೆಸ್ ಪರ್ಯಾಯ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ 60 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಇಂದಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ಅಭ್ಯರ್ಥಿ ಪಿ.ಎಸ್. ಸಂಧ್ಯಾ ಆರೋಪಿಸಿದರು. ಇಲ್ಲಿನ ಮಹಿಳಾ ಸಮಾಜದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಆಳ್ವಿಕೆಯಲ್ಲಿ ಜನರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಏಜೆಂಟ್‍ರಂತೆ ವರ್ತಿಸಿದೆ. ಉದ್ಯೋಗ ಸೃಷ್ಟಿ ಮರೀಚಿಕೆ ಯಾಗಿದೆ.
ನೋಟು ಅಮಾನ್ಯೀಕರಣ ಹಾಗೂ ಜಿಎಸ್‍ಟಿಯಿಂದಾಗಿ ಹಲವಷ್ಟು ಉದ್ಯೋಗಗಳು ನಾಶವಾಗಿವೆ ಎಂದು ದೂರಿದರು. ಜಾಗತೀಕರಣ, ಉದಾರೀಕರಣ ನೀತಿಗಳನ್ನು ಜಾರಿಗೆ ತಂದಿರುವದೇ ಕಾಂಗ್ರೆಸ್, ಯುಪಿಎ ಆಡಳಿತದ 10 ವರ್ಷದ ಭ್ರಷ್ಟಾಚಾರ ಮರೆಯಲು ಸಾಧ್ಯವಿಲ್ಲ. ಜೆಡಿಎಸ್ ನಂತಹ ಪ್ರಾದೇಶಿಕ ಪಕ್ಷಗಳಾಗಲಿ ಅವುಗಳ ಘಟ್‍ಬಂಧನ್‍ಗೆ ಆಗಲಿ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದರು. ವೇದಿಕೆಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ. ರವಿ, ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ್ ಮೇಟಿ, ಜಿಲ್ಲೆಯ ಚುನಾವಣಾ ಉಸ್ತುವಾರಿ ಸುಭಾಷ್ ಬೆಟ್ಟದಕೊಪ್ಪ ಉಪಸ್ಥಿತರಿದ್ದರು.