ಗೋಣಿಕೊಪ್ಪ ವರದಿ, ಎ. 2 : ದೇಶದಲ್ಲಿ ಬೇಡಿಕೆಗೆ ಸಾಕಾಗುವಷ್ಟು ಕಾಫಿ, ಕಾಳುಮೆಣಸು ಶೇ. 85 ರಷ್ಟು ಉತ್ಪನ್ನಗಳು ಲಭ್ಯವಿದ್ದರೂ, ಹೊರ ದೇಶಗಳಿಂದ ಕಳ್ಳದಾರಿಯಲ್ಲಿ ದೇಶಕ್ಕೆ ಸಾಗಣೆಯಾಗುತ್ತಿರುವದರಿಂದ ಸ್ಥಳೀಯ ಬೆಳೆ ಉತ್ಪನ್ನಗಳ ಬೆಲೆ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ರೈತ ಸಂಘ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಕೊಡಗು ರೈತ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರೈತ ಸಂಘ ಕಾರ್ಯಕರ್ತರ ಸಮಾವೇಶ ಹಾಗೂ ಕಾಫಿ-ಕಾಳುಮೆಣಸು ಆಮದು ನೀತಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ದೇಶದಲ್ಲಿ ಬೇಡಿಕೆಗೆ ಸಾಕಾಗುವಷ್ಟು ಕಾಫಿ, ಕಾಳುಮೆಣಸು ಶೇ. 85 ರಷ್ಟು ಉತ್ಪನ್ನಗಳು ಲಭ್ಯವಿದೆ. ಆದರೂ ಕಳ್ಳದಾರಿಯಲ್ಲಿ ದೇಶಕ್ಕೆ ಸಾಗಣೆಯಾಗುತ್ತಿರುವದರಿಂದ ಇಲ್ಲಿನ ಉತ್ಪನ್ನಗಳ ಬೆಲೆ ಕುಸಿತಕ್ಕೆ ಕಾರಣವಾಗುತ್ತಿದೆ. ಕೇಂದ್ರ ಸರ್ಕಾರ ಕಳ್ಳ ದಾರಿಗೆ ಸಹಕಾರ ನೀಡಬಾರದು ಎಂದು ಒತ್ತಾಯಿಸಿದರು. ಇದರಿಂದ ರೈತನಿಗೆ ನೇರ ಹೊಡೆತ ಬೀಳುತ್ತಿದೆ. ಇದನ್ನು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ತರುವಂತಾಗಬೇಕು. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.

ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಆಮದು ಹಾಗೂ ರಪ್ತು ನೀತಿಯನ್ನು ಬಲ ಪಡಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಬೆಳೆಗಾರರ ರಕ್ಷಣೆಗೆ ಪೂರಕವಾದ ನೀತಿಯನ್ನು ಅನುಸರಿಸಲು ಎಡವುತ್ತಿರುವದರಿಂದ ಬೆಲೆ ಕುಸಿತ ಸಮಸ್ಯೆಯಿಂದ ರೈತ ನಿತ್ಯ ನರಳುವಂತಾಗಿದೆ ಎಂದರು.

ರೈತ ಸಂಘ ಶಿಸ್ತು, ಸಂಯಮದಿಂದ ತನ್ನದೇ ಆದ ಪ್ರಮುಖವಾಗಿ ರೈತ ಸಂಘದ ಮಾಜಿ ಜಿಲ್ಲಾ ಸಂಚಾಲಕರಾಗಿದ್ದ ಶ್ರೀಮಂಗಲದ ಚಿಮ್ಮಂಗಡ ಗಣೇಶ್ ಅವರು ಸಂಘದ ಗಮನಕ್ಕೆ ಬಾರದೆ ರೈತ ಸಂಘದ ಹೆಸರಿನಲ್ಲಿ ರೈತರ ಮನೆಮನೆಗೆ ತೆರಳಿ ಸದಸ್ಯತ್ವ ನೋಂದಾವಣೆ ಮಾಡಿಸುತ್ತಿರುವ ಬಗ್ಗೆ ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ರೈತ ಸಂಘಕ್ಕೆ ಮುಜುಗರ ತರುತ್ತಿರುವ ಗಣೇಶ್ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸದಸ್ಯರು ಒಕ್ಕೊರಲಿನ ಒತ್ತಾಯ ಮಾಡಿದರು, ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಗಣೇಶ್ ಅವರೊಂದಿಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿದ್ದೇನೆ; ಸಂಘ ವಿರೋಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಇರುವಂತೆ ಮನವಿ ಮಾಡಿದ್ದೆ, ಆದರೂ ಅವರು ಸಂಘಕ್ಕೆ ದಕ್ಕೆ ತರುವ ನಿಟ್ಟಿನಲ್ಲಿ ರೈತರಿಂದ ಸದಸ್ಯತ್ವ ಪಡೆದು ಹೊಸ ಸಂಘಟನೆ ಕಟ್ಟುವದಾಗಿ ಹೇಳಿಕೆ ನೀಡಿ ಜಿಲ್ಲೆಯ ರೈತರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಜ.25 ರಂದು ಪದಾಧಿಕಾರಿಗಳ ಆಯ್ಕೆಯ ಕುರಿತು ನಡೆದ ಸಂಘದ ಆಂತರಿಕ ಚುನಾವಣೆಯಲ್ಲಿ ಪುನರ್ ಆಯ್ಕೆ ಬಯಸಿ ಸಂಚಾಲಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.ನಂತರ ಸಂಘದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯ ಮಾಡಿದ್ದರು. ಈ ಸಂಬಂಧ ಚುನಾವಣೆಯಾದ ಮೇಲೆ ಆ ಸ್ಥಾನವನ್ನು ನೀಡಲು ಅಸಾಧ್ಯವೆಂದು ತಿಳಿ ಹೇಳಲಾಗಿತ್ತು. ಆದರೆ ಅವರು ಸಂಘದ ನೀತಿ ನಿಯಮಗಳಿಗೆ ವಿರೋಧವಾಗಿ ವರ್ತನೆ ಮಾಡುತ್ತಿದ್ದುದರಿಂದ ಅವರನ್ನು ಕರೆಸಿ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ತಿಳುವಳಿಕೆ ಮತ್ತು ಎಚ್ಚರಿಕೆ ನೀಡಲಾಗಿತ್ತು ಆದಾಗ್ಯೂ ಅವರು ಸಂಘ ವಿರೋಧಿ ಚಟುವಟಿಕೆಯನ್ನು ಮುಂದುವರೆಸುತ್ತಾ ಈಗಾಗಲೇ ಸಂಘದ ಶಿಸ್ತು ಕ್ರಮಕ್ಕೆ ಒಳಗಾಗಿರುವ ಹೊರ ಜಿಲ್ಲೆಯ ವ್ಯಕ್ತಿಗಳ ಸಂಪರ್ಕ ಬೆಳೆಸಿ ಸಂಘದ ಸಿದ್ಧಾಂತ, ಶಿಸ್ತು ಉಲ್ಲಂಘನೆ ಮಾಡಿರುತ್ತಾರೆ.

ಈ ಸಂಬಂಧಸಭೆಯಲ್ಲಿ ಗಂಭೀರವಾಗಿ ಚರ್ಚಿಸಿ ಇವರನ್ನು ರೈತ ಸಂಘದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿರುವದಾಗಿ ಸಭೆಗೆ ತಿಳಿಸಿ,ಜಿಲ್ಲೆಯ ರೈತರು ಇವರೊಂದಿಗೆ ಯಾವದೇ ರೀತಿಯಲ್ಲಿ ರೈತ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಕರೆ ನೀಡಿದರು. ಸಭೆಯು ಅಧ್ಯಕ್ಷರ ತೀರ್ಮಾನವನ್ನು ಒಮ್ಮತದಿಂದ ಒಪ್ಪಿಕೊಂಡಿತು.

-ಹೆಚ್.ಕೆ. ಜಗದೀಶ್