ಗೋಣಿಕೊಪ್ಪಲು, ಮಾ. 31: ಪವಿತ್ರ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರತಿಯೊಬ್ಬ ಮತದಾರನೂ ಮುಂದಿನ ಚುನಾವಣೆಯಲ್ಲಿ ಭಾಗವಹಿಸುವಂತೆ ಡಿ.ವೈ.ಎಸ್.ಪಿ. ನಾಗಪ್ಪ ಕರೆ ನೀಡಿದರು.
ಗೋಣಿಕೊಪ್ಪಲುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೂತ್ ಮಟ್ಟದ ಮತದಾನ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಮತದಾರರರು ಯಾವದೇ ಭಯಪಡದೇ ಮತ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಬೇಕು. ಅನಾವಶ್ಯಕವಾಗಿ ತಮಗೆ ತೊಂದರೆ ನೀಡುವ ಯಾವದೇ ವ್ಯಕ್ತಿಯಾದರು ಕೂಡಲೇ ಸಂಬಂಧಪಟ್ಟ ಪೊಲೀಸರಿಗೆ ತಿಳಿಸಬೇಕು. ತಪ್ಪಿತಸ್ಥರ ಮೇಲೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದರು.
ಗೋಣಿಕೊಪ್ಪ ವೃತ್ತ ನಿರೀಕ್ಷಕ ವಸಂತ್ ಮಾತನಾಡಿ, ಮತದಾರರಿಗೆ ವಿಶ್ವಾಸ ತುಂಬುವ ಕಾರ್ಯಕ್ರಮ ಇದಾಗಿದೆ. ಇಲಾಖೆಯು ಮತದಾರರಿಗೆ ಅಗತ್ಯ ನೆರವು ನೀಡಲು ಕಟಿಬದ್ಧವಾಗಿದೆ ಎಂದರು.
ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ಪ್ರತಿ ಬೂತ್ನಲ್ಲಿಯೂ ಬೂತ್ ಆಫೀಸರ್, ಮಾಹಿತಿದಾರರನ್ನು ನೇಮಕಗೊಳಿಸಲಾಗುವದು ಎಂದರು. ಹಿರಿಯ ನಾಗರಿಕರಾದ ಸುಬ್ರಮಣಿ ಮಾತನಾಡಿ, ಅಬಕಾರಿ ಇಲಾಖೆಯು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಗಾಂಜಾದ ಬಗ್ಗೆಯೂ ಇಲಾಖೆ ನಿಗಾವಹಿಸಬೇಕು ಎಂದರು. ಗ್ರಾಮ ಪಂಚಾಯಿತಿ ಸದಸ್ಯೆ ಎಂ. ಮಂಜುಳ ಮಾತನಾಡಿ, 2 ಮತ್ತು 3ನೇ ವಾರ್ಡಿನಲ್ಲಿ ಚುನಾವಣಾ ಸಂದರ್ಭದಲ್ಲಿ ಈ ಹಿಂದೆ ಅಹಿತಕರ ಘಟನೆಗಳು ನಡೆದಿದ್ದವು. ಈ ಬಾರಿ ಸಿ.ಸಿ. ಕ್ಯಾಮೆರಗಳನ್ನು ಮಂಜಾಗೃತಾ ಕ್ರಮವಾಗಿ ಆಳವಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ 2ನೇ-3ನೇ ವಿಭಾಗದ ಪ್ರಮುಖರಾದ ಮಂಜು ರೈ, ರಾಜೇಶ್, ಅಬ್ದುಲ್ ಸಮ್ಮದ್, ಪ್ರಮಿತ ಇನ್ನಿತರರು ಹಾಜರಿದ್ದರು. ಗೋಣಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಸ್ವಾಗತಿಸಿ, ವಂದಿಸಿದರು.