ಮಡಿಕೇರಿ, ಮಾ. 31: ಬಿ. ಶೆಟ್ಟಿಗೇರಿ ಗ್ರಾಮದ ಚೊಟ್ಟೆಪಂಡ ಕುಟುಂಬಕ್ಕೆ ಸಂಬಂಧಿಸಿದಂತೆ ಪುರಾತನ ಕಾಲದಿಂದ ಇರುವ ಐತಿಹಾಸಿಕ ವಿವರ ಕುಟುಂಬದ ವಂಶಾವಳಿಯನ್ನು ಒಳ ಗೊಂಡಂತೆ ಒಕ್ಕ ಚರಿತ್ರೆ ಎಂಬ ಸ್ಮರಣ ಸಂಚಿಕೆಯನ್ನು ಕುಟುಂಬದ ಹಲವು ಪ್ರಮು ಖರು ಸೇರಿ ಹೊರ ತಂದಿದ್ದಾರೆ. ಇದರ ಬಿಡುಗಡೆ ಸಮಾರಂಭ ಇತ್ತೀಚೆಗೆ ಕುಟುಂಬದ ಐನ್‍ಮನೆಯಲ್ಲಿ ನಡೆಯಿತು.

ಯು.ಎಸ್.ಎ.ಯಲ್ಲಿರುವ ಚೊಟ್ಟೆಪಂಡ ಮೇದಪ್ಪ, ಕುಟುಂಬದ ಸದಸ್ಯ ಹ್ಯಾರಿ, ಗಣಪತಿ (ಗಪ್ಪು) ಮತ್ತಿತರರು ಈ ದಾಖಲಾತಿಯನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಮೇದಪ್ಪ ಅವರು ಜಿಲ್ಲೆಯಲ್ಲಿ ವಿವಿಧ ಕುಟುಂಬಗಳ ಹಿಂದಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದರೆ, ಸಾಕಷ್ಟು ಘಟನಾವಳಿಗಳನ್ನು ಒಳ ಗೊಂಡಿರುವಂತಹ ಐತಿಹ್ಯಗಳಿವೆ. ಆದರೆ ಈ ಕುರಿತಾಗಿ ಬಾಯಿ ಮಾತಿನಲ್ಲಿ ಹೇಳಲಾಗುತ್ತಿದೆಯಲ್ಲದೆ ಸಮರ್ಪಕ ದಾಖಲೆಗಳು ರಚನೆಗೊಂಡಿಲ್ಲ.

ಈ ಹಿನ್ನೆಲೆ ಈ ಪ್ರಯತ್ನ ನಡೆಸಿದ್ದು, ಇತರ ಕುಟುಂಬಗಳು ಇದಕ್ಕೆ ಮುಂದಾದರೆ ಸಹಕಾರ ನೀಡುವದಾಗಿ ತಿಳಿಸಿದರು.

ಸುಮಾರು 1800ನೇ ಇಸವಿಯಿಂದ ಈತನಕದ ಹಲವು ವಿವರಗಳು, ಪೂರ್ವಿಕರ ಮಾಹಿತಿಯಂತಹ ವಿಚಾರಗಳು ಇದರಲ್ಲಿ ಅಡಕವಾಗಿದೆ. ಹೆಚ್ಚಿನ ವಿವರಕ್ಕೆ (9481882312) ಸಂಪರ್ಕಿಸಬಹುದಾಗಿದೆ.