ಮಡಿಕೇರಿ, ಮಾ. 29: ಮನರಂಜನಾ ವಾಹಿನಿಯಾಗಿರುವ ಕಲರ್ಸ್ ಕನ್ನಡ ವಾಹಿನಿ ನಡೆಸಿಕೊಂಡು ಬರುತ್ತಿರುವ ರಿಯಾಲಿಟಿ ಶೋ ಕನ್ನಡ ಕೋಗಿಲೆ- ಸೀಸನ್ -2 ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದೆ. ಉದಯೋನ್ಮುಖ ಗಾಯಕರಿಗೆ ಅವಕಾಶ ಕಲ್ಪಿಸಲಾಗುವ ಈ ಕಾರ್ಯಕ್ರಮದಲ್ಲಿ ಕೊಡಗಿನ ಕುವರನೋರ್ವ ಅವಕಾಶ ಗಿಟ್ಟಿಸಿಕೊಂಡಿದ್ದಾನೆ. ಕನ್ನಡ ಕೋಗಿಲೆ ಸೀಸನ್ -2 ಮೆಗಾ ಆಡಿಷನ್ನಲ್ಲಿ ಆಯ್ಕೆಯಾಗಿ ಮುಂದಿನ ಸ್ಪರ್ಧಾ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾನೆ. ಪಾಣತ್ತಲೆ ರಕ್ಷಿತ್ ಕನ್ನಡ ಕೋಗಿಲೆಗೆ ಆಯ್ಕೆಯಾಗಿದ್ದು, ತಾ. 30ರಿಂದ (ಇಂದಿನಿಂದ) ಆತನ ಗಾಯನ ಲೋಕದ ಪಯಣ ಆರಂಭವಾಗಲಿದೆ.
ಮೂಲತಃ ಭಾಗಮಂಡಲದವರಾದ ಮಡಿಕೇರಿಯ ಕನ್ನಂಡಬಾಣೆ ನಿವಾಸಿ, ಪ್ರಸ್ತುತ ಮೈಸೂರಿನಲ್ಲಿರುವ ಮಾಜಿ ಯೋಧ ಪಾಣತ್ತಲೆ ವಸಂತ್ ಹಾಗೂ ಆಶಾ ದಂಪತಿಯರ ಪುತ್ರನಾಗಿರುವ ರಕ್ಷಿತ್ ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಬಿ.ಎಸ್.ಸಿ. ಮೈಕ್ರೋಬಯಾಲಜಿ ಅಭ್ಯಸಿಸುತ್ತಿದ್ದು, ಬಿಡುವಿನ ವೇಳೆಯಲ್ಲಿ ಗಾಯನ ಲೋಕದಲ್ಲಿ ವಿಹರಿಸುತ್ತಿರುತ್ತಾನೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರ್ ಹಾಗೂ ಸೀನಿಯರ್ ಪೂರ್ಣಗೊಳಿಸಿರುವ ಈತ, ರಾಜ್ಯದಾದ್ಯಂತ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾನೆ. ಅಲ್ಲದೆ, ಲೈವ್ ಬ್ಯಾಂಡ್ ಮೂಲಕ ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಿ ಗಮನ ಸೆಳೆದಿದ್ದಾನೆ. ಬನ್ನೇರುಘಟ್ಟದ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.
ಇದೀಗ ಈತ ಕನ್ನಡ ಕೋಗಿಲೆ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಮೆಘಾ ಆಡಿಷನ್ನ ಆಯ್ಕೆ ಪ್ರಕ್ರಿಯೆ ಭಾಗ ತಾ. 30ರಂದು (ಇಂದು) ಹಾಗೂ ತಾ. 31ರಂದು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ನಂತರದ ಸ್ಪರ್ಧಾ ಕಾರ್ಯಕ್ರಮಗಳು ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ಪ್ರಸಾರವಾಗಲಿದೆ. ಆಯ್ಕೆಯಾಗಿರುವ ಈ ಕೊಡಗಿನ ಕುವರನಿಗೆ ‘ಆಲ್ ದಿ ಬೆಸ್ಟ್’ ಹೇಳೋಣವೇ...
-ಕುಡೆಕಲ್ ಸಂತೋಷ್.