ಮಡಿಕೇರಿ, ಮಾ. 29: 17ನೆಯ ಲೋಕಸಭಾ ಚುನಾವಣೆಗೆ ಏ. 18ರಂದು ನಡೆಯಲಿರುವ ಮತದಾನಕ್ಕಾಗಿ ಇದೀಗ ಕೊಡಗು - ಮೈಸೂರು ಕ್ಷೇತ್ರದಲ್ಲಿನ ಸ್ಪರ್ಧಿಗಳ ಸ್ಪಷ್ಟ ಚಿತ್ರಣ ಅಂತಿಮಗೊಂಡಿದೆ. ಈ ಬಾರಿಯ ಚುನಾವಣಾ ಕಣದಲ್ಲಿ ಒಟ್ಟು 22 ಹುರಿಯಾಳುಗಳು ಈ ಕ್ಷೇತ್ರದಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ. ನಾಮಪತ್ರ ಪ್ರಕ್ರಿಯೆ ಅವಧಿಯಲ್ಲಿ 30 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದರು. ಪರಿಶೀಲನೆ ಸಂದರ್ಭ ಐವರ ನಾಮಪತ್ರ ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕøತಗೊಂಡಿತ್ತು. ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದ ತಾ. 29ರಂದು ಕೇವಲ ಮೂರು ಮಂದಿ ಮಾತ್ರ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದು, ಅಂತಿಮವಾಗಿ ಕಣದಲ್ಲಿ 22 ಅಭ್ಯರ್ಥಿಗಳಿದ್ದಾರೆ.
2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟು 15 ಮಂದಿ ಚುನಾವಣೆ ಎದುರಿಸಿದ್ದರೆ ಈ ಬಾರಿ ಸ್ಪರ್ಧಿಗಳ ಸಂಖ್ಯೆ 22ಕ್ಕೆ ಏರಿರುವದು ಕಂಡುಬಂದಿದೆ. ನಾಮಪತ್ರ ಸಲ್ಲಿಸಿದ್ದವರ ಪೈಕಿ ತಾ. 29ರಂದು ಪಿ.ಎಸ್. ಯಡೂರಪ್ಪ, ಖಲೀಲ್ ಎಂ. ಹಾಗೂ ಶ್ರೀನಿವಾಸ್ ಎಂಬವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಉಳಿದಂತೆ ಪ್ರಮುಖ ಪಕ್ಷವಾದ ಬಿ.ಜೆ.ಪಿ.ಯಿಂದ ಪ್ರತಾಪ್ ಸಿಂಹ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸಿ.ಎಚ್. ವಿಜಯಶಂಕರ್ ಸೇರಿದಂತೆ ಇನ್ನಿತರ ಕೆಲವು ಪಕ್ಷ ಹಾಗೂ ಪಕ್ಷೇತರರು ಸೇರಿದಂತೆ 22 ಹುರಿಯಾಳುಗಳು ಕೊಡಗು - ಮೈಸೂರು ಕ್ಷೇತ್ರದ ಅಭ್ಯರ್ಥಿಗಳಾಗಿ ಮತ ಸಮರ ಎದುರಿಸಲು ಸಿದ್ಧರಾಗಿದ್ದಾರೆ.