ಮಡಿಕೇರಿ, ಮಾ.29: ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ ಹಾಗೂ ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಶ್ರೀ ತಲಕಾವೇರಿ ಕ್ಷೇತ್ರದಲ್ಲಿ ಅಗಸ್ತ್ಯೇಶ್ವರ ಸಾನಿಧ್ಯ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶ ಹಾಗೂ ಶ್ರೀ ರುದ್ರ ಹೋಮ ಏ.5 ರಿಂದ 11ರ ವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ಜೀವನದಿ ಕಾವೇರಿಯ ಉಗಮ ಸ್ಥಾನದಲ್ಲಿ ಏಳು ದಿನಗಳ ಕಾಲ ನಡೆಯುವ ವಿಧಿ ವಿಧಾನಗಳ ಕುರಿತು ಮಾಹಿತಿ ನೀಡಿದರು.ಪ್ರತಿ 12 ವರ್ಷಗಳಿಗೊಮ್ಮೆ ನಡೆಸುವ ಅಷ್ಟಬಂಧ ಬ್ರಹ್ಮಕಲಶ ಕಾರ್ಯಕ್ರಮ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ, ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರುಗಲಿದೆಯೆಂದರು.ಏ.5ರಂದು ಸಂಜೆ 5 ಗಂಟೆಗೆ ತಂತ್ರಿಗಳ ಆಗಮನ, ಸ್ವಾಗತ, ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಬಿಂಬ ಪರಿಗ್ರಹ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಜ್ಞ ಹೋಮ, ವಾಸ್ತು ಬಲಿ, ಅಂಕುರಾರ್ಪಣೆ ನಡೆಯಲಿದೆ. ಏ.6 ರಂದು ಬೆಳಿಗ್ಗೆ 7.30 ರಿಂದ ಗಣಪತಿ ಹೋಮ, ಅಂಕುರ ಪೂಜೆ, ಬಿಂಬ ಶುದ್ಧಿ ಕಲಶ ಪೂಜೆ, ಬಿಂಬಶುದ್ಧಿ ಕಲಶಾಭಿಷೇಕ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ, ಹೋಮ ಕ¯ಶಾಭಿಶೇಷ ಹಾಗೂ ರಾತ್ರಿ 7 ರಿಂದ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆಯೆಂದು ತಿಳಿಸಿದರು.

ಏ.7ರಂದು ಬೆಳಿಗ್ಗೆ 7.30 ರಿಂದ ಗಣಪತಿ ಹೋಮ, ಅಂಕುರ ಪೂಜೆ, ಶಾಂತಿ ಹೋಮಗಳು ಮತ್ತು ರಾತ್ರಿ 7 ರಿಂದ ಅಂಕುರ ಪೂಜೆ ದುರ್ಗಾ ನಮಸ್ಕಾರ ಪೂಜೆ ಹಾಗೂ ಮಂಟಪ ಸಂಸ್ಕಾರ ನಡೆಯಲಿದೆ. ಏ.8 ರಂದು ಬೆಳಿಗ್ಗೆ 7.30 ರಿಂದ ಗಣಪತಿ ಹೋಮ, ತ್ರಿಕಾಲ ಪೂಜೆ, ಅಂಕುರ ಪೂಜೆ, ತತ್ವ ಕಲಶ ಪೂಜೆ,

(ಮೊದಲ ಪುಟದಿಂದ) ತತ್ವ ಹೋಮ, ತತ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಅನುಜ್ಞಾ ಪೂಜೆ, ಪ್ರಾರ್ಥನೆ ಹಾಗೂ ರಾತ್ರಿ 7 ಗಂಟೆಯಿಂದ ತ್ರಿಕಾಲ ಪೂಜೆ, ಅಂಕುರ ಪೂಜೆ ನಡೆಯಲಿದೆ.

ಏ.9 ರಂದು ಬೆಳಿಗ್ಗೆ 7.30 ರಿಂದ ಗಣಪತಿ ಹೋಮ, ಅಂಕುರ ಪೂಜೆ, ಸಂಹಾರ ತತ್ವ ಕಲಶಪೂಜೆ, ಸಂಹಾರ ತತ್ವಹೋಮ, ಸಂಹಾರ ತತ್ವ ಕಲಶಾಭಿಷೇಕ, ಜೀವ ಕಲಶ ಪೂಜೆ, ಜೀವೋಧ್ವಾಸನೆ, ಜೀವಕಲಶ ಶಯ್ಯಾಗಮನ, ಶಯನ, ಸಂಜೆ 6 ರಿಂದ ಶಿರತತ್ವ ಹೋಮ, ಕುಂಭೇಷ ಕರ್ಕರಿಕಲಶ ಪೂಜೆ, ಧ್ಯಾನಾಧಿüವಾಸ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಪ್ರಾಸಾದ ಅಧಿವಾಸ, ಕಲಾಶಾಧಿವಾಸ

ಜರುಗಲಿದೆ.

ಏ.10 ರಂದು ಬೆಳಿಗ್ಗೆ 5 ರಿಂದ ಗಣಪತಿ ಹೋಮ, ರತ್ನ ನ್ಯಾಸ, ಬೆಳಿಗ್ಗೆ 6.37 ರಿಂದ 8.26ರ ವರೆಗೆ ಸಲ್ಲುವ ರೋಹಿಣಿ ನಕ್ಷತ್ರ ಮೇಷ ರಾಶಿಯಲ್ಲಿ ಶ್ರೀ ಅಗಸ್ತ್ಯೇಶ್ವರ ಸಾನಿಧ್ಯ ಪುನಃ ಪ್ರತಿಷ್ಠೆ, ಅಷ್ಟಬಂಧ ಲೇಪನ, ಕುಂಭೇಶ ಕಲಶಾಭಿಷೇಕ, ನಿದ್ರಾ ಕಲಶಾಭಿಷೇಕ, ಜೀವ ಕಲಶಾಭಿಷೇಕ, ಪರಾವಾಹನೆ, ಅವಸ್ಥಾವಾಹನೆ, ಪ್ರಾಣಾವಾಹನೆ, ಪ್ರತಿಷ್ಠಾ ಪೂಜೆ, ಪರಿಕಲಶಾಭೀಷೇಕ, ಬ್ರಹ್ಮಕಲಶಾಭಿಷೇಕ ಮತ್ತು ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಏ.11 ರಂದು ಬೆಳಿಗ್ಗೆ 7 ಗಂಟೆಯಿಂದ ರುದ್ರಪಾರಾಯಣ, ಶ್ರೀ ರುದ್ರ ಹೋಮ ಮತ್ತು 12.30ಕ್ಕೆ ಶ್ರೀ ರುದ್ರಹೋಮ ಪೂರ್ಣಾಹುತಿ ಹಾಗೂ ಪ್ರಸಾದ ವಿತರಣೆಯಾಗಲಿದೆ ಎಂದು ಬಿ.ಎಸ್.ತಮ್ಮಯ್ಯ ಮಾಹಿತಿ ನೀಡಿದರು.

ಏಳು ದಿನಗಳ ಕಾಲ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸುಮಾರು 25 ರಿಂದ 29 ಲಕ್ಷ ರೂ.ವೆಚ್ಚವಾಗ ಬಹುದೆಂದು ತಿಳಿಸಿದರು. ಮುಂದಿನ ಸಾಲಿನಲ್ಲಿ ಭಾಗಮಂಡಲದ ಶ್ರೀ ಭಗಂಡೇಶ್ವರ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ಚಿಂತನೆ ಇದೆ ಎಂದು ತಿಳಿಸಿದರು.

ಇಂದು ಸಭೆ

ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಪೂರಕವಾಗಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಮತ್ತು ತಕ್ಕಮುಖ್ಯಸ್ಥರುಗಳ ಸಭೆಯನ್ನು ಮಾ.30 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಭಾಗಮಂಡಲದಲ್ಲಿ ಕರೆಯಲಾಗಿದೆ ಯೆಂದು ತಮ್ಮಯ್ಯ ಹೇಳಿದರು.

ಪಾವಿತ್ರ್ಯತೆಗೆ ಆದ್ಯತೆ

ತಮ್ಮ ಅಧ್ಯಕ್ಷತೆಯ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದ್ದು, ಕ್ಷೇತ್ರಗಳ ಅಭಿವೃದ್ಧಿಗೆ ಎಲ್ಲಾ ಜಿಲ್ಲಾಧಿಕಾರಿಗಳು ಸಹಕಾರ ನೀಡಿದ್ದಾರೆ.

ಕ್ಷೇತ್ರದ ಪಾವಿತ್ರ್ಯತೆ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿದ್ದು, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಟನ್‍ಗಟ್ಟಲೇ ತ್ಯಾಜ್ಯವನ್ನು ನದಿ ಪಾತ್ರದಲ್ಲಿ ಸಂಗ್ರಹಿಸಲಾಗಿದೆ. ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದ ಮೇಲ್ಛಾವಣಿ ದುರಸ್ತಿಗೂ ಕ್ರಮಕೈಗೊಳ್ಳಲಾಗಿದೆ. ತಲಕಾವೇರಿ ವ್ಯಾಪ್ತಿಯಲ್ಲಿ ನಿಯಮ ಬಾಹಿರ ಚಟುವಟಿಕೆಗಳ ತಾಣವಾಗಿದ್ದ ಹಳೇ ಸರ್ಕಾರಿ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಸಮಿತಿ ವತಿಯಿಂದಲೇ ನಡೆಯಲಿದೆ. ಚುನಾವಣೆ ಕಳೆದ ನಂತರ ಭಾಗಮಂಡಲದಲ್ಲಿ 94 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸದ ಕಾಮಗಾರಿಗೆ ಚಾಲನೆ ನೀಡಲಾಗುವದು. ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಪ್ರವಾಸಿಗರ ಮೇಲೆ ನಿಗಾವಹಿಸಲು ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ತಲಕಾವೇರಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಕುವವರಿಗೆ ಮತ್ತು ತೀರ್ಥ ಕುಂಡಿಕೆಯನ್ನು ಅಶುದ್ಧಗೊಳಿ ಸುವವರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಂಕಲ್ಪ ಮಂಟಪದಲ್ಲಿ ಕುಂಕುಮಾರ್ಚನೆ

ತಲಕಾವೇರಿಯ ಕುಂಡಿಕೆ ಬಳಿ ಕುಂಕುಮಾರ್ಚನೆ ಮಾಡುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುವದರಿಂದ ಪ್ರತ್ಯೇಕ ಸಂಕಲ್ಪ ಮಂಟಪದಲ್ಲಿ ಕುಂಕುಮಾರ್ಚನೆ ಮಾಡಲಾಗುತ್ತಿದೆ. ಉಳಿದಂತೆ ಎಲ್ಲಾ ಪೂಜಾ ಕಾರ್ಯಗಳು ಕುಂಡಿಕೆ ಬಳಿಯೇ ನಡೆಯುತ್ತಿದ್ದು, ಜನದಟ್ಟಣೆಯ ಕಾರಣದಿಂದ ಕುಂಕುಮಾರ್ಚನೆಯನ್ನು ಸಂಕಲ್ಪ ಮಂಟಪದಲ್ಲಿ ಮಾಡುವದು ಅನಿವಾರ್ಯವಾಗಿದೆ. ಈ ಪರ್ಯಾಯ ವ್ಯವಸ್ಥೆಗೆ ಅರ್ಚಕ ವೃಂದವೂ ತೃಪ್ತಿ ವ್ಯಕ್ತಪಡಿಸಿದೆ ಎಂದು ತಮ್ಮಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳಾದ ಕೆ.ಎಸ್.ಅಣ್ಣಯ್ಯ, ಉದಿಯಂಡ ಪಿ. ಸುಭಾಷ್, ಎಸ್. ರವಿಕುಮಾರ್, ಕೆದಂಬಾಡಿ ಟಿ.ರಮೇಶ್ ಹಾಗೂ ಪಾರುಪತ್ತೆದಾರ ಕೊಂಡೀರ ಪೊನ್ನಣ್ಣ ಉಪಸ್ಥಿತರಿದ್ದರು.